
Udupi: ನಾಡಹಬ್ಬ ಮಾದರಿಯಲ್ಲಿ ಶೀರೂರು ಪರ್ಯಾಯೋತ್ಸವ ಆಚರಣೆ
Saturday, August 2, 2025
ಲೋಕಬಂಧು ನ್ಯೂಸ್, ಉಡುಪಿ
ಮುಂಬರುವ ಜ.18ರಂದು ನಡೆಯುವ ಶೀರೂರು ಮಠದ ಪರ್ಯಾಯ ಮಹೋತ್ಸವವನ್ನು ನಾಡಹಬ್ಬದ ಮಾದರಿಯಲ್ಲಿ ಆಚರಿಸುವ ನಿಟ್ಟಿನಲ್ಲಿ ಪ್ರಪ್ರಥಮ ಬಾರಿಗೆ ಈ ಬಾರಿಯ ಪರ್ಯಾಯ ಮಹೋತ್ಸವ ಪ್ರಯುಕ್ತ ನಗರದ ವಿದ್ಯುತ್ ದೀಪಾಲಂಕಾರಕ್ಕೆ 50 ಲಕ್ಷ ಅನುದಾನವನ್ನು ನಗರಸಭೆಯಿಂದ ಮೀಸಲಿಡಲಾಗಿದೆ ಎಂದು ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ , ಶಾಸಕ ಯಶಪಾಲ್ ಸುವರ್ಣ ಹೇಳಿದರು.
ಶನಿವಾರ ಕೃಷ್ಣಾಪುರ ಮಠದ ಶ್ರೀಕೃಷ್ಣ ಸಭಾ ಭವನದಲ್ಲಿ ನಡೆದ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದ ಸ್ವಾಗತ ಸಮಿತಿ ಪದಾಧಿಕಾರಿಗಳ ಪ್ರಥಮ ಸಭೆಯಲ್ಲಿ ಮಾತನಾಡಿದರು.
ಪರ್ಯಾಯ ಮಹೋತ್ಸವ ಅತ್ಯಂತ ವೈಭವಯುತವಾಗಿ ನಡೆಸಲು ಸರ್ವ ಭಕ್ತರು ಸಹಕಾರ ನೀಡುವ ಭರವಸೆ ಇದ್ದು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಚಿವರನ್ನು ಪರ್ಯಾಯ ಮಹೋತ್ಸವಕ್ಕೆ ಆಹ್ವಾನಿಸುವ ಮೂಲಕ ಉಡುಪಿ ಪರ್ಯಾಯವನ್ನು ವಿಶಿಷ್ಟವಾಗಿ ನಡೆಸುವ ಯೋಜನೆ ಸ್ವಾಗತ ಸಮಿತಿ ಮುಂದಿದೆ ಎಂದರು.
ಶೀರೂರು ಮಠದ ದಿವಾನ ಡಾ. ಉದಯಕುಮಾರ್ ಸರಳತ್ತಾಯ ಮಾತನಾಡಿ, ಈ ಪರ್ಯಾಯವನ್ನು ಶ್ರೀಕೃಷ್ಣ ಪರಮಾತ್ಮ ನಿಮ್ಮ ಮೂಲಕ ಯಶಸ್ವಿಯಾಗಿಸುತ್ತಾನೆ. ಭಕ್ತರೇ ಶ್ರೀಕೃಷ್ಣನ ಪ್ರತಿರೂಪವಾಗಿದ್ದು, ಆತ ಎಲ್ಲರ ಮೂಲಕ ಪೂಜೆ ಸ್ವೀಕರಿಸುತ್ತಾನೆ. ಹಾಗಾಗಿ ಪರ್ಯಾಯ ಯಶಸ್ವಿಯಾಗಿಸುವಲ್ಲಿ ಜವಾಬ್ದಾರಿಗಳನ್ನು ಎಲ್ಲರೂ ಹಂಚಿಕೊಳ್ಳಬೇಕು.
ಅಷ್ಟಮಠಾಧೀಶರ ಆಶೀರ್ವಾದೊಂದಿಗೆ ಪರ್ಯಾಯ ಯಶಸ್ವಿಯಾಗುವಂತಾಗಲಿ ಎಂದು ಆಶಿಸಿದರು.
ಹೊರ ರಾಜ್ಯಗಳಲ್ಲೂ ಸಮಿತಿ
ಸ್ವಾಗತ ಸಮಿತಿ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ನಮ್ಮ ಜವಾಬ್ದಾರಿಯನ್ನು ನಾವು ಸರಿಯಾಗಿ ನಿಭಾಯಿಸಿ ದೇವರ ಕಾರ್ಯವನ್ನು ಯಶಸ್ವಿಯಾಗಿಸಬೇಕು.
ಶೀರೂರು ಶ್ರೀಗಳು ಎರಡು ವರ್ಷಗಳಿಂದ ದೇಶದಾದ್ಯಂತ ಪರ್ಯಟನೆ ಮಾಡುತ್ತಿದ್ದು, ಪರ್ಯಾಯದ ಆರಂಭಕ್ಕೂ ಮುನ್ನ ಕಡಿಯಾಳಿಯಿಂದ ಪುರಪ್ರವೇಶ ನಡೆಯಲಿದೆ.
ಹೊರೆ ಕಾಣಿಕೆ ಮೆರವಣಿಗೆ, ಪರ್ಯಾಯೋತ್ಸವ ಮೆರವಣಿಗೆ ಅದ್ದೂರಿಯಾಗಿ ನಡೆಯಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಎರಡು ವರ್ಷದ ಪರ್ಯಾಯದ ಕಾರ್ಯಯೋಜನೆ ಬಗ್ಗೆ ಚೆನ್ಬೈ, ಮುಂಬೈ, ಪುಣೆ, ಬೆಂಗಳೂರು ಸೇರಿದಂತೆ ವಿವಿಧೆಡೆ ಸಮಿತಿ ರಚಿಸುವುದಾಗಿ ತಿಳಿಸಿದರು.
ಇದೇ ವೇಳೆ ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಜಯಕರ ಶೆಟ್ಟಿ ಇಂದ್ರಾಳಿ, ಸಂಚಾಲಕರನ್ನಾಗಿ ರಮೇಶ್ ಕಾಂಚನ್, ಸುಪ್ರಸಾದ್ ಹಾಗೂ ಶ್ರೀಧರ್ ಭಟ್ ಉಚ್ಚಿಲ ಅವರನ್ನು ಆಯ್ಕೆ ಮಾಡಲಾಯಿತು.
ನಗರ ಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ, ಕೋಶಾಧಿಕಾರಿ ಜಯಪ್ರಕಾಶ್ ಕೆದ್ಲಾಯ, 'ಉಡಾ' ಅಧ್ಯಕ್ಷ ದಿನಕರ ಹೆರೂರು, ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ, ಮಾಜಿ ಶಾಸಕ ಲಾಲಾಜಿ ಮೆಂಡನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಶ್ವತ್ಥ ಭಾರದ್ವಾಜ್ ನಿರೂಪಿಸಿದರು.