-->
Udupi: ಬನ್ನಂಜೆಯವರಿಂದ ಆಧ್ಯಾತ್ಮಿಕ ಅರಿವು

Udupi: ಬನ್ನಂಜೆಯವರಿಂದ ಆಧ್ಯಾತ್ಮಿಕ ಅರಿವು

ಲೋಕಬಂಧು ನ್ಯೂಸ್, ಉಡುಪಿ
ಹಿಂದೂ ಧರ್ಮದ ಆಧ್ಯಾತ್ಮಿಕತೆ ಬಗ್ಗೆ ಅಸಡ್ಡೆ ಹಾಗೂ ಅರಿವಿನ ಕೊರತೆಯಿದ್ದ ಕಾಲಘಟ್ಟದಲ್ಲಿ ಜನಸಾಮಾನ್ಯರಿಗೂ ಆಧ್ಯಾತ್ಮಿಕತೆಯ ಅರಿವು ಮೂಡಿಸಿದವರು ವಿದ್ಯಾವಾಚಸ್ಪತಿ ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯರು ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ 90ರ ಸ್ಮರಣೆ ಅಂಗವಾಗಿ ಶನಿವಾರ ಕೃಷ್ಣಮಠ ರಾಜಾಂಗಣದಲ್ಲಿ ನಡೆದ ಶ್ರೀಗೋವಿಂದ ನಮನ 90 ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.


ಸ್ವಾತಂತ್ರ್ಯ ಬಂದ ಬಳಿಕ ಭಾರತದಲ್ಲಿ ವಿದೇಶಿಯರ ಶಿಕ್ಷಣ ಕ್ರಮ ಇತ್ಯಾದಿಗಳ ಮೂಲಕ ಭಾರತೀಯ ಆಧ್ಯಾತ್ಮಿಕತೆ ಬಗ್ಗೆ ಅಸಡ್ಡೆ, ಅವಹೇಳನ ಇತ್ಯಾದಿ ವಿಪ್ಲವಗಳು ನಡೆದಿದ್ದಾಗ ಬನ್ನಂಜೆ ಗೋವಿಂದಾಚಾರ್ಯರು ಮಡಿವಂತಿಕೆಯನ್ನು ಬದಿಗಿಟ್ಟು ಆಧುನಿಕ ದೃಷ್ಟಿಕೋನ ಮತ್ತು ಆವಿಷ್ಕಾರಗಳ ಮೂಲಕ ಜನಸಾಮಾನ್ಯರಿಗೆ ತಮ್ಮ ಉಪನ್ಯಾಸ, ಪ್ರವಚನ, ಕೃತಿಗಳ ಮೂಲಕ ಆಧ್ಯಾತ್ಮಿಕ ಅರಿವು ಮೂಡಿಸಿದರು.


ಬನ್ನಂಜೆಯವರ ಕಾಯ ಅಳಿದಿದ್ದರೂ ಅವರ ಕೃತಿಯ ಮೂಲಕ ಬನ್ನಂಜೆ ಬಗ್ಗೆ ಅರಿವು ಅಜರಾಮರವಾಗಿದೆ ಎಂದರು.


ಸಾನ್ನಿಧ್ಯ ವಹಿಸಿದ್ದ ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಆಧ್ಯಾತ್ಮಿಕ ಗೊಂದಲಗಳಿಗೆ ಉತ್ತರ ನೀಡುವ ಮೂಲಕ ತಿಳಿವಳಿಕೆ ನೀಡಿದವರು ಬನ್ನಂಜೆ ಎಂದರು.


ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಬನ್ನಂಜೆಯವರ ಪ್ರವಚನಗಳಿಂದ ಪ್ರಭಾವಿತರಾಗಿರುವುದನ್ನು ಸ್ಮರಿಸಿದರು.


ಈ ಸಂದರ್ಭದಲ್ಲಿ `ಬನ್ನಂಜೆ ಕೈಪಿಡಿ' ಅನಾವರಣ ಹಾಗೂ ಹರಿದಾಸ ಚಂದ್ರಿಕಾ ಮತ್ತು ಓ.ಆರ್.ಪಿ. ಅಮೆರಿಕ ಆಯೋಜಿತ `ಉಷಾಹರಣ' ಕಾವ್ಯ ವಿಮರ್ಶೆಯ ಪ್ರಶಸ್ತಿ ಪ್ರದಾನ ಮಾಡಲಾಯಿತು.


ಡಾ. ಉಷಾ ಚಡಗ ಅಭ್ಯಾಗತರಾಗಿದ್ದರು.


ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಅಧ್ಯಕ್ಷ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ಸ್ವಾಗತಿಸಿ, ವೀಣಾ ಬನ್ನಂಜೆ ವಂದಿಸಿದರು. ಮಹಿತೋಷ ಆಚಾರ್ಯ ನಿರೂಪಿಸಿದರು.


`ನನ್ನ ಪಿತಾಮಹ' ನಾಟಕ ಸುಚೇಂದ್ರಪ್ರಸಾದ್ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.

Ads on article

Advertise in articles 1

advertising articles 2

Advertise under the article