Modi ಹುಟ್ಟೂರಲ್ಲಿ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಶಿಬಿರ
Thursday, September 18, 2025
ಲೋಕಬಂಧು ನ್ಯೂಸ್, ಉಡುಪಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ 75ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಇಲ್ಲಿನ ಪ್ರಸಾದ್ ನೇತ್ರಾಲಯ ಹಾಗೂ ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಉಚಿತ ನೇತ್ರ ತಪಾಸಣೆ, ಉಚಿತ ಕನ್ನಡಕ ವಿತರಣೆ ಹಾಗೂ ಶಸ್ತ್ರಚಿಕಿತ್ಸೆ ಸತತ 5ನೇ ವರ್ಷದ ಶಿಬಿರ ಮೋದಿ ಹುಟ್ಟೂರಾದ ಗುಜರಾತ್ ರಾಜ್ಯದ ವಡ್ನಗರದಲ್ಲಿ ನಡೆಯಿತು.ವಡ್ನಗರ್ ಸರ್ವೋದಯ ಸೇವಾ ಟ್ರಸ್ಟ್ ಮತ್ತು ಬೆಂಗಳೂರಿನ ಒನ್ ಸೈಟ್ ಎಸ್ಸಿಲಾರ್ ಲಕ್ಸೋಟಿಕಾ ಫೌಂಡೇಶನ್ ಸಹಭಾಗಿತ್ವದಲ್ಲಿ ಆಯೋಜಿಸಲಾದ ಶಿಬಿರಕ್ಕೆ ಪ್ರಧಾನಿ ಮೋದಿ ಹಿರಿಯ ಸಹೋದರ ಸೋಮ್ ಭಾಯಿ ಮೋದಿ ಚಾಲನೆ ನೀಡಿದರು.
ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಹಾಗೂ ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್ ವಿಶ್ವಸ್ಥ ಡಾ.ಕೃಷ್ಣಪ್ರಸಾದ್ ಕೂಡ್ಲು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಜಗತ್ತು ಕಂಡ ಅತೀ ವಿಶಿಷ್ಟ ನಾಯಕ ಪ್ರಧಾನಿ ನರೇಂದ್ರ ಮೋದಿ. ತನ್ನ ವಿಶಿಷ್ಟ ಅಂತಾರಾಷ್ಟ್ರೀಯ ಪ್ರಭಾವದಿಂದ ಭಾರತವನ್ನು ವಿಶ್ವದ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಿದ್ದಾರೆ.
ಅವರ ಜನ್ಮದಿನದಂದು ಕಳೆದ 5 ವರ್ಷದಿಂದ ನಮ್ಮ ಆಸ್ಪತ್ರೆ ಹಾಗೂ ಟ್ರಸ್ಟ್ ವತಿಯಿಂದ ಇಲ್ಲಿನ ಜನರಿಗೆ ನೇತ್ರ ಚಿಕಿತ್ಸೆ ನಾವು ನೀಡುತ್ತಿರುವ ಅಳಿಲು ಸೇವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿತೇಂದ್ರ ಮೋದಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ನೇತ್ರ ಜ್ಯೋತಿ ಹಾಸ್ಪಿಟಲ್ ಸಹಯೋಗದೊಂದಿಗೆ ನೇತ್ರ ದಾನ ಅರಿವು ಜಾಥಾ ಹಾಗೂ ನೇತ್ರ ದಾನ ವಾಗ್ದಾನ ಕಾರ್ಯಕ್ರಮ ನಡೆಯಿತು.
ಸುಮಾರು 2 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಜಾಥಾದಲ್ಲಿ ಭಾಗವಹಿಸಿದರು.
ನೇತ್ರ ತಪಾಸಣಾ ಶಿಬಿರದಲ್ಲಿ 784 ಜನರ ತಪಾಸಣೆ ನಡೆಸಲಾಯಿತು. 574 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು. 103 ಜನರನ್ನು ಉಚಿತ ಶಸ್ತ್ರಚಿಕಿತ್ಸೆಗೆ ಗುರುತಿಸಲಾಯಿತು.
ಕಾರ್ಯಕ್ರಮದಲ್ಲಿ ಊಂಜಾ ಶಾಸಕ ಕೀರ್ತಿ ಭಾಯಿ ಪಟೇಲ್, ಜಿಎಂಇಆರ್.ಜಿಎಸ್ ಮೆಡಿಕಲ್ ಕಾಲೇಜಿನ ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಹರ್ಷದ್ ಪಟೇಲ್, ಮೆಡಿಕಲ್ ಕಾಲೇಜಿನ ಡೀನ್ ಡಾ.ಸುನೀಲ್ ಓಜಾ ಭಾಗವಹಿಸಿದ್ದರು.