Udupi: ಸೆ.21ರಂದು ಗುರು ಸಂದೇಶ ಸಾಮರಸ್ಯ ಜಾಥಾ
Thursday, September 18, 2025
ಲೋಕಬಂಧು ನ್ಯೂಸ್, ಉಡುಪಿ
ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ನೇತೃತ್ವದಲ್ಲಿ ಜಿಲ್ಲೆಯ ಎಲ್ಲಾ ಬಿಲ್ಲವ ಸಂಘಸಂಸ್ಥೆಗಳ ಸಹಕಾರದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆ ಪ್ರಯುಕ್ತ ಗುರು ಸಂದೇಶ ಸಾಮರಸ್ಯ ಜಾಥಾ ಸೆ.21ರಂದು ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಎಂ. ಪೂಜಾರಿ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಅಪರಾಹ್ನ 2 ಗಂಟೆಗೆ ಬನ್ನಂಜೆ ಜಯಲಕ್ಷ್ಮೀ ಪಾರ್ಕಿಂಗ್ ಪ್ರದೇಶದಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ರೀನಾ ಸುವರ್ಣ ಮತ್ತು ದೈವ ನರ್ತಕ ರವಿ ಪಡ್ಡಂ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಸಂಸದರು, ಶಾಸಕರು, ರಾಜಕೀಯ ನಾಯಕರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಉಡುಪಿಯ ಎಲ್ಲಾ ಬಿಲ್ಲವ ಸಂಘಸಂಸ್ಥೆಗಳ ಅಧ್ಯಕ್ಷರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಬನ್ನಂಜೆ ಜಯಲಕ್ಷ್ಮೀ ವಸ್ತ್ರ ಮಳಿಗೆ ಎದುರುಗಡೆಯಿಂದ ಆರಂಭಗೊಳ್ಳುವ ಜಾಥಾ, ಸಿಟಿ ಬಸ್ ಸ್ಟ್ಯಾಂಡ್, ಕೋರ್ಟ್ ರೋಡ್, ಮಿಷನ್ ಕಂಪೌಂಡ್, ಬೈಲೂರು ಮಹಿಷಮರ್ದಿನಿ ದೇವಸ್ಥಾನ, ಕೊರಂಗ್ರಪಾಡಿ, ಮಾರ್ಪಳ್ಳಿ, ಕುಕ್ಕಿಕಟ್ಟೆ, ಅಲೆವೂರು, ರಾಂಪುರ - ಬೆಂದೂರುಕಟ್ಟೆ, ಮಣಿಪುರ ಮಾರ್ಗದ ಮೂಲಕ ಸಾಗಿಬಂದು ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದಲ್ಲಿ ಗುರುಪೂಜೆಯೊಂದಿಗೆ ಸಂಪನ್ನಗೊಳ್ಳಲಿದೆ ಎಂದು ತಿಳಿಸಿದರು.
ಬ್ರಹ್ಮಶ್ರೀ ಗುರು ನಾರಾಯಣ ಗುರುಗಳ ಶಾಶ್ವತ ಪುತ್ಥಳಿಯನ್ನು ಬನ್ನಂಜೆಯಲ್ಲಿ ಸ್ಥಾಪಿಸಬೇಕು. ಅಲ್ಲದೇ ವಿಧಾನಸೌಧದ ಮುಂಭಾಗದಲ್ಲಿ ಅವರ ಪುತ್ಥಳಿ ನಿರ್ಮಾಣವಾಗಬೇಕು. ಕಳೆದ ಹಲವು ವರ್ಷಗಳಿಂದ ಶ್ರೀ ನಾರಾಯಣ ಗುರು ನಿಗಮ ಮಂಡಳಿ ಸ್ಥಾಪನೆ ಕುರಿತು ಸರ್ಕಾರಗಳು ಕೇವಲ ಭರವಸೆಗಳನ್ನು ಮಾತ್ರ ನೀಡುತ್ತಿವೆ. ಅದನ್ನು ಶೀಘ್ರವಾಗಿ ಅನುಷ್ಠಾನಗೊಳಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಗೌರವಾಧ್ಯಕ್ಷ ದಿವಾಕರ್ ಸನಿಲ್, ಉಪಾಧ್ಯಕ್ಷರಾದ ಮಹೇಶ್ ಕುಮಾರ್ ಮೂಲ್ಕಿ ಮತ್ತು ವಿಜಯ್ ಕೋಟ್ಯಾನ್, ಗೌರವ ಸಲಹೆಗಾರ ಸುಧಾಕರ್ ಡಿ. ಅಮೀನ್ ಇದ್ದರು.