-->
Mysore ದಸರಾ ಉದ್ಘಾಟಿಸಿದ ಬಾನು

Mysore ದಸರಾ ಉದ್ಘಾಟಿಸಿದ ಬಾನು

ಲೋಕಬಂಧು ನ್ಯೂಸ್, ಮೈಸೂರು
ಕರ್ನಾಟಕದ ನಾಡಹಬ್ಬ ವಿಶ್ವ ವಿಖ್ಯಾತ  ಮೈಸೂರು ದಸರಾ ಉತ್ಸವ ಭಕ್ತಿಪೂರ್ಣ ವಾತಾವರಣದಲ್ಲಿ ಸೋಮವಾರ ಅಧಿಕೃತವಾಗಿ ಆರಂಭವಾಯಿತು.ಬೂಕರ್ ಪ್ರಶಸ್ತಿ ಪುರಸ್ಕೃತೆ ಖ್ಯಾತ ಲೇಖಕಿ ಬಾನು ಮುಷ್ತಾಕ್ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದೇವಿಯ ಮಂಗಳಾರತಿ ಸ್ವೀಕರಿಸಿ, ದೀಪ ಬೆಳಗಿ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉತ್ಸವಕ್ಕೆ ಚಾಲನೆ ನೀಡಿದರು.ಬೆಳಿಗ್ಗೆ ಬಾನು ಮುಷ್ತಾಕ್ ಕುಟುಂಬ ಸಮೇತರಾಗಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದರು. ಹಸಿರು ಅಂಚಿನ ಹಳದಿ ಬಣ್ಣದ ಮೈಸೂರು ರೇಷ್ಮೆ ಸೀರೆ ತೊಟ್ಟು, ಮೈಸೂರು ಮಲ್ಲಿಗೆ ಮುಡಿದು ಸಾಂಪ್ರದಾಯಿಕ ದಿರಿಸಿನಲ್ಲಿ ಆಗಮಿಸಿದ್ದರು. ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯದ ಹಲವು ಸಚಿವರು ಇದ್ದರು.


ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಾನು ಮುಷ್ತಾಕ್, ಗಣಪತಿಗೆ ಕೈ ಮುಗಿದು ಪ್ರಾರ್ಥನೆ ಸಲ್ಲಿಸಿ, ನಂತರ ಮಂಗಳಾರತಿ ಸ್ವೀಕರಿಸಿ ಪ್ರಸಾದವ ಪಡೆದರು. ಈ ವೇಳೆ ಜಾನಪದ ಕಲಾತಂಡಗಳು ಗಣ್ಯರನ್ನು ಸ್ವಾಗತಿಸಿ ಸಂಭ್ರಮವನ್ನು ಹೆಚ್ಚಿಸಿದವು.


ಸಿಎಂ ಹಾಗೂ ಸಚಿವರು ಐರಾವತ ಬಸ್ಸಿನಲ್ಲಿ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದರೆ, ಬಾನು ಮುಷ್ತಾಕ್ ಮತ್ತು ಅವರ ಕುಟುಂಬ ಖಾಸಗಿ ವಾಹನದಲ್ಲಿ ದೇವಸ್ಥಾನಕ್ಕೆ ಬಂದಿದ್ದರು.


ಪರಂಪರೆಯಂತೆ ಮಹಿಷಾಸುರ ಪ್ರತಿಮೆ ಬಳಿ ಗಣ್ಯರನ್ನು ಸ್ವಾಗತಿಸಿದ ನಂತರ ಬಾನು ಮುಷ್ತಾಕ್, ಸಿಎಂ ಸಿದ್ದರಾಮಯ್ಯ ಮತ್ತು ಸಚಿವರು ದೇವಸ್ಥಾನದ ಒಳಗಡೆ ಪ್ರವೇಶಿಸಿ ಪೂಜೆಯಲ್ಲಿ ಭಾಗವಹಿಸಿದರು. ಬಳಿಕ ಬಾನು ಮುಷ್ತಾಕ್ ದೀಪ ಬೆಳಗಿ, ಪುಷ್ಪಾರ್ಚನೆ ಮೂಲಕ ನಾಡಹಬ್ಬ ಮೈಸೂರು ದಸರಾವನ್ನು ಅಧಿಕೃತವಾಗಿ ಉದ್ಘಾಟಿಸಿದರು.


ಆ ಮೂಲಕ  11 ದಿನಗಳ ಕಾಲ ನಡೆಯುವ ನಾಡಹಬ್ಬದ ಹಬ್ಬದ ಸಂಭ್ರಮಕ್ಕೆ ಚಾಲನೆ ದೊರಕಿದ್ದು, ಮುಂದಿನ ದಿನಗಳಲ್ಲಿ ಜಗಜ್ಜನನಿ ಚಾಮುಂಡೇಶ್ವರಿ ದೇವಿ ಹಾಗೂ ಮೈಸೂರಿನ ಸಾಂಸ್ಕೃತಿಕ ಸಿರಿತನ, ಜಾನಪದ ವೈಭವ, ಯೋಧರ ಪರೇಡ್ ಹಾಗೂ ಕಲಾ-ಸಾಹಿತ್ಯದ ವೈವಿಧ್ಯಮಯ ಕಾರ್ಯಕ್ರಮಗಳು ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸಲಿವೆ.

Ads on article

Advertise in articles 1

advertising articles 2

Advertise under the article