-->
Mysore: ಸಂಸ್ಕೃತಿ ಹೃದಯ ಹೃದಯಗಳಿಗೆ ಸೇತುವೆ

Mysore: ಸಂಸ್ಕೃತಿ ಹೃದಯ ಹೃದಯಗಳಿಗೆ ಸೇತುವೆ

ಲೋಕಬಂಧು ನ್ಯೂಸ್, ಮೈಸೂರು
ಸಂಸ್ಕೃತಿ, ಹೃದಯ ಹೃದಯಗಳಿಗೆ ಸೇತುವೆಯಾಗಿದೆ. ಅದು ಪ್ರೀತಿಯನ್ನು ಹರಡಲು ಪ್ರಯತ್ನಿಸುತ್ತದೆಯೇ ವಿನಾಃ ದ್ವೇಷವನ್ನಲ್ಲ. ಎಲ್ಲಾ ಜೀವಗಳನ್ನು ಗೌರವಿಸಬೇಕು ಎಂಬುದಾಗಿ ಈ ಭೂಮಿ ನನಗೆ ಕಲಿಸಿದೆ. ಜಗತ್ತು ಯುದ್ಧದ ಹಾದಿಯಲ್ಲಿ ಮುನ್ನಡೆಯುತ್ತಿರುವಾಗ ಮತ್ತು ಮಾನವೀಯತೆ ದ್ವೇಷ ಮತ್ತು ರಕ್ತಪಿಪಾಸೆಯಿಂದ ಉತ್ತೇಜಿಸಲ್ಪಟ್ಟಾಗ ಮೈಸೂರು ದಸರಾ ಶಾಂತಿ ಮತ್ತು ಸೌಹಾರ್ದತೆಗೆ ಸ್ಪಷ್ಟ ಕರೆಯಾಗಿದೆ ಎಂದು ಲೇಖಕಿ ಬಾನು ಮುಷ್ತಾಕ್ ಹೇಳಿದರು.
ವಿಶ್ವ ಪ್ರಸಿದ್ಧ ಮೈಸೂರು ದಸರಾ ಉದ್ಘಾಟಿಸಿ ಮಾತನಾಡಿದರು.


ಮುಸ್ಲಿಮರಿಗೆ ಜವಾಬ್ದಾರಿ
ಜಯಚಾಮರಾಜೇಂದ್ರ ಒಡೆಯರ್ ಮುಸ್ಲಿಮರಲ್ಲಿ ನಂಬಿಕೆ ಇಟ್ಟಿದ್ದರು ಮತ್ತು ರಾಜ್ಯವನ್ನು ಕಾಪಾಡುವ ಜವಾಬ್ದಾರಿಯನ್ನೂ ಅವರಿಗೆ ವಹಿಸಿದ್ದರು. ಒಡೆಯರ್ ಕಾಲದಲ್ಲಿ ಬೆಳಗೊಳದವರಾದ ಸಿಪಾಯಿ ಮೊಹಮ್ಮದ್ ಗೌಸ್ ಎಂಬವರು ಮೈಸೂರು ರಾಜಮನೆತನದ ಸೈನ್ಯದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿದ್ದರು. ಅವರು ಸಂಬಂಧದಲ್ಲಿ ನನಗೆ ಮಾವ ಆಗಬೇಕು ಎಂದು ಸ್ಮರಿಸಿದ ಮುಷ್ತಾಕ್, ನನಗೆ ಬೂಕರ್ ಪ್ರಶಸ್ತಿ ಬಂದಾಗ ನನ್ನ ಆಪ್ತ ಗೆಳತಿ ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬರುವುದಾಗಿ ಹೇಳಿದ್ದಳು ಎಂದು ಸ್ಮರಿಸಿದರು.


ಹೊಸ ಸಮಾಜ ಕಟ್ಟೋಣ
ಸಾಂವಿಧಾನಿಕ ಮೌಲ್ಯಗಳನ್ನು ಹಾಗೂ ಪರಸ್ಪರರ ನಂಬಿಕೆ ಮತ್ತು ಮೌಲ್ಯಗಳನ್ನು ಗೌರವಿಸೋಣ. ಏಕತೆ ಮತ್ತು ಸಮಗ್ರತೆ ಈ ಭೂಮಿಯ ಸುಗಂಧವಾಗಲಿ. ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಸದಾ ಮಾರ್ಗರ್ಶಕವಾಗಿರಲಿ. ದಸರಾ ಹಬ್ಬ ರಾಜ್ಯ ಮತ್ತು ರಾಷ್ಟ್ರದ ಗಡಿ ಮೀರಿ, ಪ್ರಪಂಚದಾದ್ಯಂತ ಶಾಂತಿ, ಸಾಮರಸ್ಯ ಮತ್ತು ನ್ಯಾಯದ ಕಿಡಿ ಹೊತ್ತಿಸಲಿ. ನಮ್ಮ ಸಂಸ್ಕೃತಿ ನಮ್ಮ ಬೇರು, ಸೌಹಾರ್ದ ನಮ್ಮ ಶಕ್ತಿ, ಆರ್ಥಿಕತೆಯೇ ನಮ್ಮ ರೆಕ್ಕೆ. ವಿಶ್ವಕ್ಕೆ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ಭಾರತದ ನೆಲೆಯಲ್ಲಿ ನಮ್ಮ ಯುವ ಶಕ್ತಿಯೊಂದಿಗೆ ಸೇರಿ ಮಾನವೀಯ ಮೌಲ್ಯಗಳ ಪ್ರೀತಿಯ ಹೊಸ ಸಮಾಜ ಕಟ್ಟೋಣ. ಅದರಲ್ಲಿ ಎಲ್ಲರಿಗೂ ಸಮಪಾಲು, ಸಮಬಾಳು ಇರಲಿ ಎಂದು ಆಶಿಸಿದರು.


ಚಾಮುಂಡಿ ಶಕ್ತಿಯ ಪ್ರತೀಕ
ಚಾಮುಂಡೇಶ್ವರಿ ಎಂದರೆ ಹೆಣ್ಣಿನಲ್ಲಿರುವ ಅಪಾರ ಶಕ್ತಿ. ಸ್ತ್ರೀತ್ವ ಎಂದರೆ ಕೇವಲ ಮೃದುತ್ವ, ತಾಳ್ಮೆ ಎಂದಲ್ಲ ಅಪಾರ ಗಟ್ಟಿ ಬದುಕಿನ ಹೋರಾಟ ಎಂಬುದನ್ನು ನಾವು ಅರಿಯಬೇಕಿದೆ. ಮೈಸೂರಿನ ಸಮಸ್ತ ಒಡೆಯರ್ ಅರಸೊತ್ತಿಗೆಯಲ್ಲಿ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಔದಾರ್ಯಕ್ಕೆ ಮಾದರಿ. ಸಂಪತ್ತು ಹಂಚಿಕೊಂಡರೆ ವೃದ್ಧಿಯಾಗುತ್ತದೆ, ಶಕ್ತಿಯನ್ನು ಹಂಚಿಕೊಂಡಾಗ ಮಾತ್ರ ದೀರ್ಘ ಕಾಲ ಬದುಕುತ್ತದೆ ಎಂದು ಎಲ್ಲ ಮೈಸೂರು ಅರಸರು ನಂಬಿದ್ದರು ಎಂದರು.


ಕನ್ನಡ ಪುಸ್ತಕ ಪ್ರಾಧಿಕಾರದಿಂದ `ಬುಕರ್ ಬಾನು ಬದುಕು ಬರಹ' ಪುಸ್ತಕ ಪ್ರಕಟವಾಗುತ್ತಿದ್ದು, ಅದರಲ್ಲಿ ನನ್ನ ಆತ್ಮಕಥೆಯ ಒಂದು ಭಾಗ ಇರಲಿದೆ. ಅದರಲ್ಲಿ ನನ್ನ ಮತ್ತು ಹಿಂದೂ ಧರ್ಮದೊಂದಿಗಿನ ಸಂಬಂಧ, ಬಾಂಧವ್ಯದ ಬಗ್ಗೆ ಬರೆದಿದ್ದೇನೆ ಎಂದು ತಿಳಿಸಿದರು.


ಸಿಎಂಗೆ ಕೃತಜ್ಞತೆ
ಬಂದಿರುವ ಅನೇಕ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ದಸರಾ ಉತ್ಸವದಲ್ಲಿ ನಾನು ಭಾಗವಹಿಸಲು ಅವಕಾಶ ಕಲ್ಪಿಸಿ, ಕರ್ನಾಟಕ ಸರ್ಕಾರದ ಪರವಾಗಿ ಆಹ್ವಾನ ನೀಡಿ, ನೈತಿಕ ಬೆಂಬಲ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಬಾನು ಮುಷ್ತಾಕ್ ಹೇಳಿದರು.

Ads on article

Advertise in articles 1

advertising articles 2

Advertise under the article