-->
Mysore ಅರಮನೆಯಲ್ಲಿ ಖಾಸಗಿ ದರ್ಬಾರ್

Mysore ಅರಮನೆಯಲ್ಲಿ ಖಾಸಗಿ ದರ್ಬಾರ್

ಲೋಕಬಂಧು ನ್ಯೂಸ್, ಮೈಸೂರು
ಮೈಸೂರು ದಸರಾ ಮಹೋತ್ಸವದ ಸಂಪ್ರದಾಯದಂತೆ ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅರಮನೆಯ ದರ್ಬಾರ್ ಹಾಲ್‍ನಲ್ಲಿ ರತ್ನಖಚಿತ ಸಿಂಹಾಸನವೇರಿ ದರ್ಬಾರ್ ನಡೆಸುವ ಮೂಲಕ ಈ ಹಿಂದಿನ ರಾಜ ವೈಭವದ ನೆನಪು ಮರುಕಳಿಸುವಂತೆ ಮಾಡಿದರು.ನವರಾತ್ರಿ ಪೂಜಾ ಮಹೋತ್ಸವದಲ್ಲಿ ರಾಜವಂಶಸ್ಥರು ಅರಮನೆಯಲ್ಲಿ ನಡೆಸುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಖಾಸಗಿ ದರ್ಬಾರ್‌ಗೆ ಮಹತ್ವವಿವೆ. ಸೋಮವಾರ ಆರಂಭವಾದ ಖಾಸಗಿ ದರ್ಬಾರ್ ಆಯುಧ ಪೂಜೆಯ ದಿನವಾದ ಅ. 1ರ ವರೆಗೂ ಪ್ರತಿದಿನ ಸಂಜೆ ನಡೆಯಲಿದೆ.


ಅರಮನೆಯ ದರ್ಬಾರ್ ಹಾಲ್ ಹಾಗೂ ಕನ್ನಡಿ ತೊಟ್ಟಿ ಸೇರಿದಂತೆ ವಿವಿಧೆಡೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್, ಆದ್ಯವೀರ್ ನರಸಿಂಹರಾಜ ಒಡೆಯರ್, ಯುಗಾಧ್ಯಕ್ಷ ಕೃಷ್ಣರಾಜ ಒಡೆಯರ್ ಪಾಲ್ಗೊಂಡರು.


ನವರಾತ್ರಿಯ ಮೊದಲ ದಿನವಾದ ಸೋಮವಾರ ಅರಮನೆಯಲ್ಲಿ ವಿವಿಧ ಪೂಜಾ ಕಾರ್ಯಗಳು ಜರುಗಿದವು. ಮುಂಜಾನೆ 4.30ಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಎಣ್ಣೆ ಶಾಸ್ತ್ರ ಮಾಡಿಸಲಾಯಿತು. ಬೆಳಗ್ಗೆ 5.30ರಿಂದ 5.45ರೊಳಗೆ ದರ್ಬಾರ್ ಹಾಲ್‍ನಲ್ಲಿದ್ದ ಸಿಂಹಾಸನಕ್ಕೆ ಸಿಂಹ (ಸಿಂಹದ ತಲೆ) ಜೋಡಣೆ ನಡೆಯಿತು.


ಬಳಿಕ ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ ಬೆಳಿಗ್ಗೆ 9.55ರಿಂದ 10.15ರೊಳಗೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್  ಮತ್ತು ತ್ರಿಷಿಕಾ ಕುಮಾರಿ ಒಡೆಯರ್ ಅವರಿಗೆ ವಾಣಿ ವಿಲಾಸ ದೇವರಮನೆಯಲ್ಲಿ ಕಂಕಣ ಧಾರಣೆ ಮಾಡಲಾಯಿತು.


ಸಿಂಹಾಸನ ಆರೋಹಣಕ್ಕೂ ಮುನ್ನ ಕಲಶ ಪೂಜೆ, ಸಿಂಹಾಸನ ಪೂಜೆ ನಡೆಸಲಾಯಿತು. ಸಿಂಹಾಸನದ ಸಮೀಪವೇ ನಡೆದ ಕಲಶ ಪೂಜೆಯಲ್ಲಿ ಯುದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಂಡು ವಿಧಿ ವಿಧಾನದಂತೆ ಪೂಜೆ ನೆರವೇರಿಸಿದರು.


ಪೂಜೆ ಮುಗಿದ ನಂತರ ಸಿಂಹಾಸನಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದರು. ಸಿಂಹಾಸನಕ್ಕೆ ಜೋಡಿಸಲಾಗಿದ್ದ ಸಿಂಹಕ್ಕೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು. ನಂತರ ಮಧ್ಯಾಹ್ನ 12.42ರಿಂದ 12.58ರ ನಡುವಿನ ಸುಮುಹೂರ್ತದಲ್ಲಿ ರತ್ನಖಚಿತ ಸಿಂಹಾಸನದಲ್ಲಿ ವಿರಾಜಮಾನರಾದರು.
ಎಂದಿನಂತೆ ಪೊಲೀಸ್ ಬ್ಯಾಂಡ್ ವಾದನದ ಸಂಗೀತ, ಖಾಸಗಿ ದರ್ಬಾರ್‌ಗೆ ರಾಜ ಕಳೆಯ ಮೆರಗು ನೀಡಿತ್ತು. ಪ್ರತಿ ವರ್ಷವೂ ದರ್ಬಾರ್ ವೇಳೆ ಪೊಲೀಸ್ ಬ್ಯಾಂಡ್ ವಾದನ ಇರಲಿದ್ದು, ಈ ಬಾರಿ ಚಾಮರಾಜೇಂದ್ರ ಒಡೆಯರ್ ವಿರಚಿತ ಗೀತೆಗಳನ್ನು ನುಡಿಸಿ, ಗಮನ ಸೆಳೆದರು.

Ads on article

Advertise in articles 1

advertising articles 2

Advertise under the article