
Sringeri:ವೈಭವದ ಶರನ್ನವರಾತ್ರಿ ಮಹೋತ್ಸವ
Tuesday, September 23, 2025
ಲೋಕಬಂಧು ನ್ಯೂಸ್, ಶೃಂಗೇರಿ
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದಲ್ಲಿ ಶಾರದಾ ಶರನ್ನವರಾತ್ರಿ ಮಹೋತ್ಸವ ವೈಭವದಿಂದ ನಡೆಯುತ್ತಿದೆ.ಭಾದ್ರಪದ ಅಮಾವಾಸ್ಯೆಯಂದು ಶ್ರೀ ಶಾರದಾ ದೇವಿಗೆ ಮಹಾಭಿಷೇಕ ನಡೆದು ವಿಶ್ವಪ್ರಸೂತಿಕಾ ಅಲಂಕಾರ ಮಾಡಲಾಗಿತ್ತು. ಪ್ರತಿಪದೆಯಿಂದ ಹುಣ್ಣಿಮೆ ವರೆಗೆ ಸೆ.22ರಿಂದ ಅ.7ರ ವರೆಗೆ ಪ್ರತಿನಿತ್ಯ ವಿವಿಧ ಧಾರ್ಮಿಕ ವಿಧಿಗಳು, ಚಂಡಿಕಾ ಹೋಮ, ದೇವಿ ಪಾರಾಯಣ, ವಿಶೇಷ ಪೂಜೆಗಳೊಂದಿಗೆ ನಡೆಯಲಿದೆ.
ಪ್ರತಿದಿನ ದೇವಿಯನ್ನು ವೈವಿಧ್ಯಮಯ ಅಲಂಕಾರಗಳಿಂದ ಅಲಂಕರಿಸಲಾಗುತ್ತಿದ್ದು ಸೋಮವಾರ ಮತ್ತು ಮಂಗಳವಾರ ಬ್ರಾಹ್ಮೀ (ಹಂಸವಾಹಿನಿ) ಅಲಂಕಾರ ಮಾಡಲಾಗಿತ್ತು.
ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರು ಮತ್ತು ಜಗದ್ಗುರು ಶ್ರೀ ವಿಧುಶೇಖರಭಾರತಿ ಸನ್ನಿಧಾನಂಗಳವರು ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ನಡೆಸಿದರು.
ರಾತ್ರಿ ದಿಂಡಿ ಉತ್ಸವ (ಸ್ವರ್ಣರಥೋತ್ಸವ), ದೀಪಾರಾಧನೆ ಬಳಿಕ ಜಗದ್ಗುರು ಶ್ರೀ ವಿಧುಶೇಖರಭಾರತಿ ಸನ್ನಿಧಾನಂಗಳವರ ದರ್ಬಾರ್ ಮಹೋತ್ಸವ ನಡೆಯಿತು.
ಮಹಾನವಮಿ ಪರ್ಯಂತ ಪ್ರತಿನಿತ್ಯ ವಿಶೇಷ ಅಲಂಕಾರ, ಪೂಜೆ, ದರ್ಬಾರ್ ಮಹೋತ್ಸವ ನಡೆಯಲಿದ್ದು, ವಿಜಯ ದಶಮಿಯಂದು ಹಗಲು ದರ್ಬಾರ್, ಜಗದ್ಗುರುಗಳಿಂದ ಶ್ರೀರಾಮ ಪಟ್ಟಾಭಿಷೇಕ ಸರ್ಗದ ಪ್ರವಚನ ನಡೆಯಲಿದೆ.
ಏಕಾದಶಿಯಂದು ಶ್ರೀಶಾರದಾಮಾತೆಯ ರಥೋತ್ಸವ, ಜಗದ್ಗುರು ಮಹಾಸ್ವಾಮಿಗಳ ಅಡ್ಡಪಲ್ಲಕಿ ಉತ್ಸವ, ಹುಣ್ಣಿಮೆಯಂದು ತೆಪ್ಪೋತ್ಸವ ನಡೆಯಲಿದೆ.