Udupi: ಲಿಂಗಾಯತ ಧರ್ಮ ಹಿಂದೂ ಧರ್ಮದ ಭಾಗವಲ್ಲ
Thursday, September 18, 2025
ಲೋಕಬಂಧು ನ್ಯೂಸ್, ಉಡುಪಿ
ಲಿಂಗಾಯತ ಧರ್ಮ ಸನಾತನ ಧರ್ಮ ಅಥವಾ ಹಿಂದೂ ಧರ್ಮದ ಭಾಗವಲ್ಲ. ಅದು ಸ್ವತಂತ್ರ ಧರ್ಮ. ಬಸವಣ್ಣನೇ ಧರ್ಮಗುರು. ವಚನ ಸಾಹಿತ್ಯಗಳೇ ಧರ್ಮಗ್ರಂಥ ಎಂದು ಬಾಲ್ಕಿಯ ಡಾ. ಶ್ರೀ ಬಸವಲಿಂಗ ಪಟ್ಟದದೇವರು ಪ್ರತಿಪಾದಿಸಿದರು.ನಗರದ ಪುರಭವನದಲ್ಲಿ ಗುರುವಾರ ನಡೆದ ಬಸವ ಸಂಸ್ಕೃತಿ ಅಭಿಯಾನದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಬುದ್ದ ಸ್ಥಾಪಿಸಿದ ಬೌದ್ಧ ಧರ್ಮದಂತೆ, ಮಹಾವೀರನ ಜೈನಧರ್ಮ ಹಾಗೂ ಏಸುವಿನ ಕ್ರಿಶ್ಚಿಯನ್ ಧರ್ಮದಂತೆ ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಿಸಿದ್ದಾರೆ. ವೀರಶೈವರು ವಚನಗಳನ್ನು ಧರ್ಮಗ್ರಂಥ ಎಂದು ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಲಿಂಗಾಯತ ಹಾಗೂ ವೀರಶೈವರಿಗೆ ಭಿನ್ನಾಭಿಪ್ರಾಯವಿದೆ. ಲಿಂಗಾಯತ ಎಂಬುದು ಒಂದು ಜಾತಿಗೆ ಮಾತ್ರ ಸೀಮಿತವಾಗಿಲ್ಲ. ಅದೊಂದು ಧರ್ಮ ಎಂದರು.
ಜೈನ, ಬೌದ್ಧ, ಇಸ್ಲಾಂ, ಕ್ರೈಸ್ತ ಧರ್ಮಗಳು ಅಲ್ಪಸಂಖ್ಯಾತ ಎಂದು ಸಂವಿಧಾನದಡಿ ವಿವಿಧ ಸೌಲಭ್ಯಗಳು ಸಿಗುತ್ತಿವೆ. ಅದೇ ಸೌಲಭ್ಯಗಳು ಲಿಂಗಾಯತ ಧರ್ಮದವರಿಗೂ ಸಿಗಬೇಕು ಎಂದವರು ಆಗ್ರಹಿಸಿದರು.
ಕಾಯಕ ಹೇಗೆ ಗಳಿಸಬೇಕು ಎಂದು ಹೇಳಿದರೆ, ದಾಸೋಹ ಆ ಗಳಿಕೆಯನ್ನು ಹೇಗೆ ಬಳಸಬೇಕು ಎಂದು ಸೂಚಿಸುತ್ತದೆ. ದಾನ ನೀಡುವಾಗ ದಾನ ನೀಡುವವನು ಶ್ರೇಷ್ಠ ಹಾಗೂ ಪಡೆದವನು ನಿಕೃಷ್ಟ ಎಂಬ ಭಾವವಿದೆ. ಆದರೆ, ದಾಸೋಹದಲ್ಲಿ ದಾನ ಪಡೆದವನೇ ಶ್ರೇಷ್ಠನಾಗುತ್ತಾನೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ಶ್ರೀ ಶಿವಾನಂದ ಸ್ವಾಮೀಜಿ ಹಂದಿಗುಂಡ, ಶ್ರೀ ಶಿವಾನಂದ ಸ್ವಾಮೀಜಿ ಹುಲಸೂರು ಮಠ, ಜಗದ್ಗುರು ಶ್ರೀ ಶಾಂತವೀರ ಸ್ವಾಮೀಜಿ ಕುಂಚಿಟಿಗ ಮಹಾಸಂಸ್ಥಾನ ಮಠ, ಶ್ರೀ ಬಸವಲಿಂಗ ಸ್ವಾಮೀಜಿ ಗವಿಮಠ, ಶ್ರೀ ವೀರನೆದ್ದ ದೇವರು ಕಲಬುರಗಿ, ಶ್ರೀ ವೀರಭದ್ರ ಸ್ವಾಮೀಜಿ ರಾಯಚೂರು, ಶ್ರೀ ಶಿವಬಸವನ ದೇವರು ಬೆಳಗಾವಿ, ಶ್ರೀ ಬಸವರಾಜ ದೇವರು ಬಸವಕಲ್ಯಾಣ ಸೇರಿದಂತೆ ಹಲವು ಸ್ವಾಮೀಜಿಗಳು ಸಂವಾದದಲ್ಲಿ ಭಾಗವಹಿಸಿದರು.
ಪೂರ್ಣಪ್ರಜ್ಞ ವಿದ್ಯಾಸಂಸ್ಥೆ, ಆದರ್ಶ ಶಿಕ್ಷಣ ಸಂಸ್ಥೆ, ಟಿಎಂಎ ಪೈ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂವಾದದಲ್ಲಿ ಭಾಗವಹಿಸಿದ್ದರು.
ಸಂಜೆ ಸರ್ವಿಸ್ ಬಸ್ ನಿಲ್ದಾಣದಿಂದ ಪುರಭವನ ವರೆಗೆ ಸಾಮರಸ್ಯ ನಡಿಗೆ ಜಾಥಾ ನಡೆಯಿತು.ಅಖಿಲ ಭಾರತ ವೀರಶೈವ ಮಹಾಸಭಾ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಡಾ.ಜಿ.ಎಸ್. ಚಂದ್ರಶೇಖರ್, ಅಧ್ಯಕ್ಷ ನಿರಂಜನ ಚೋಳಯ್ಯ, ಪ್ರಧಾನ ಕಾರ್ಯದರ್ಶಿ ಸಿದ್ಧಬಸಯ್ಯ ಚಿಕ್ಕಮಠ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಲಾಲಾಜಿ ಮೆಂಡನ್, ಕಾಂಗ್ರೆಸ್ ಮುಂದಾಳು ಪ್ರಸಾದರಾಜ್ ಕಾಂಚನ್ ಮೊದಲಾದವರು ಭಾಗವಹಿಸಿದ್ದರು.