
Udupi: ವಿಶೇಷಚೇತನರಿಗೆ ಪ್ರೋತ್ಸಾಹ ಅಗತ್ಯ
Saturday, September 13, 2025
ಲೋಕಬಂಧು ನ್ಯೂಸ್, ಉಡುಪಿ
ವಿಶೇಷಚೇತನರ ಬಗ್ಗೆ ಅನುಕಂಪದ ಬದಲು ಅವರನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ ಮತ್ತು ಅವಕಾಶ ನೀಡಿದರೆ ಅವರೂ ಸಹ ವಿಶೇಷ ಸಾಧನೆ ತೋರಲು ಸಾಧ್ಯವಿದೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚ್ ಧರ್ಮಗುರು ವಂ.ಡೆನಿಸ್ ಡೆಸಾ ಹೇಳಿದರು.
ಶುಕ್ರವಾರ ಚರ್ಚಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚರ್ಚ್ ವ್ಯಾಪ್ತಿಯ ವಿಶೇಷಚೇತನ ವ್ಯಕ್ತಿಗಳನ್ನು ಸನ್ಮಾನಿಸಿ ಮಾತನಾಡಿದರು.
ಪ್ರಸ್ತುತ ವರ್ಷದ ಕ್ರೈಸ್ತ ಧರ್ಮಸಭೆ ವಿಶೇಷ ಜುಬಿಲಿ ವರ್ಷವಾಗಿ ಆಚರಿಸುತ್ತಿದ್ದು ಈ ನಿಟ್ಟಿನಲ್ಲಿ ವಿವಿಧ ದಿನಾಚರಣೆಗಳನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ.
ಸಾಮಾನ್ಯವಾಗಿ ಸಮಾಜದಲ್ಲಿ ವಿಶೇಷಚೇತನರನ್ನು ಗುರುತಿಸುವುದು ಕಡಿಮೆ. ಈ ನಿಟ್ಟಿನಲ್ಲಿ ಉಡುಪಿ ಧರ್ಮಪ್ರಾಂತ್ಯದ ಪ್ರತೀ ಚರ್ಚಿನಲ್ಲಿ ಅಂಥ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಿ ಅವರೊಂದಿಗೆ ನಾವಿದ್ದೇವೆ ಎಂಬ ಬೆಂಬಲ ನೀಡುವ ನಿಟ್ಟಿನಲ್ಲಿ ವಿಶೇಷಚೇತನರ ಜುಬಿಲಿ ಆಚರಿಸಲಾಗುತ್ತದೆ.
ವಿಶೇಷಚೇತನ ವ್ಯಕ್ತಿಗಳಲ್ಲಿ ಸಾಮಾನ್ಯರಿಗಿಂತ ಹೆಚ್ಚು ಪ್ರತಿಭೆ, ಆತ್ಮಸ್ಥೈರ್ಯ, ಸಂಕಲ್ಪ ಇದೆ. ಸಮಾಜ ಅವರಿಗೆ ಶಕ್ತಿ ಆತ್ಮಸ್ಥೈರ್ಯ ನೀಡಿದರೆ ಉತ್ತಮ ಜೀವನ ರೂಪಿಸಿಕೊಳ್ಳುತ್ತಾರೆ. ಅವರೊಂದಿಗೆ ನಾವಿದ್ದೇವೆ ಎಂಬ ಭಾವನೆ ಮೂಡಿದಾಗ ಅವರೂ ಸಹಾ ನಮ್ಮಂತೆಯೇ ಉತ್ತಮ ಜೀವನ ನಡೆಸಲು ಸಾಧ್ಯ ಎಂದರು.
ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷೆ ಲೆಸ್ಲಿ ಆರೋಝಾ, ಕಾರ್ಯದರ್ಶಿ ಬ್ಲೆಸಿಲ್ಲಾ ಕ್ರಾಸ್ತಾ, 20 ಆಯೋಗಗಳ ಸಂಯೋಜಕಿ ವನಿತಾ ಫೆರ್ನಾಂಡಿಸ್, ಕಾನ್ವೆಂಟಿನ ಸುಪಿರೀಯರ್ ಸಿಸ್ಟರ್ ಸುಷ್ಮಾ, ಆರೋಗ್ಯ ಆಯೋಗದ ಮುಖ್ಯಸ್ಥ ರೊನಾಲ್ಡ್ ಮೊದಲಾದವರಿದ್ದರು.