ಆಳ್ವಾಸ್ ವಿರಾಸತ್ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ

ಲೋಕಬಂಧು ನ್ಯೂಸ್, ಉಡುಪಿ
ಶಿಕ್ಷಣದೊಂದಿಗೆ ಸಾಂಸ್ಕೃತಿಕ‌ ಕಾರ್ಯಕ್ರಮಗಳಿಗೂ ಆದ್ಯತೆ ನೀಡುವ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕಲಾವಿದರು ಪ್ರಸ್ತುತಪಡಿಸುವ ಆಳ್ವಾಸ್ ವಿರಾಸತ್ ಭಾರತೀಯ ಸಂಸ್ಕೃತಿಯ ದರ್ಶನ ಮಾಡಿಸುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಭಿಪ್ರಾಯ ವ್ಯಕ್ತಪಡಿಸಿದರು.ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಶನಿವಾರ ಕೃಷ್ಣಮಠದ ವಾಹನ ನಿಲುಗಡೆ ಪ್ರದೇಶದಲ್ಲಿ ನಿರ್ಮಿಸಲಾದ 'ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದ ವೇದಿಕೆ'ಯಲ್ಲಿ ನಡೆದ ಆಳ್ವಾಸ್ ಸಾಂಸ್ಕೃತಿಕ ವೈಭವ ಉದ್ಘಾಟಿಸಿ ಆಶೀರ್ವಚನ ನೀಡಿದರು.ಮಾಜಿ ಗೃಹಸಚಿವ ಡಾ.ವಿ.ಎಸ್. ಆಚಾರ್ಯ ಅವರಿಗೆ ಕಾರ್ಯಕ್ರಮ ಅರ್ಪಿಸಲಾಗಿತ್ತು.

ಡಾ.ಆಳ್ವ ಸಾಂಸ್ಕೃತಿಕ ರಾಯಭಾರಿ
ಡಾ. ಮೋಹನ ಆಳ್ವ ಅವರು ಸಾಂಸ್ಕೃತಿಕ ಸಾಮ್ರಾಜ್ಯವನ್ನು ಆಳುವವರು. ಅವರು ಸಾಂಸ್ಕೃತಿಕ ರಾಯಭಾರಿ. ಎಲ್ಲರನ್ನೂ ಮೋಹಗೊಳಿಸುವ‌ ಕಾರ್ಯಕ್ರಮಗಳ ಮೂಲಕ ಭಾರತೀಯ ಸಾಂಸ್ಕೃತಿಕ ರಸದೌತಣ ನೀಡುತ್ತಿದ್ದಾರೆ.
ತಮ್ಮ ಚತುರ್ಥ ಪರ್ಯಾಯ ಅವಧಿಯಲ್ಲಿ 1650 ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ಎಲ್ಲಾ ಕಾರ್ಯಕ್ರಮಗಳಿಗೆ ಶಿಖರಪ್ರಾಯವಾಗಿ ಆಳ್ವಾಸ್ ಕಾರ್ಯಕ್ರಮ ಮೂಡಿಬಂದಿದೆ ಎಂದರು.ಈ ಸಂದರ್ಭದಲ್ಲಿ ಡಾ.ಮೋಹನ ಆಳ್ವ ಅವರಿಗೆ ಶ್ರೀಕೃಷ್ಣ- ಗೀತಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು.

ಪರ್ಯಾಯ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಮೂಡುಬಿದಿರೆ ಜೈನ ಮಠದ ಭಟ್ಟಾರಕ ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.


ಮನರಂಜನೆಯೊಂದಿಗೆ ಸ‌ಂದೇಶ
ಪ್ರಾಸ್ತಾವಿಕವಾಗಿ ಮಾತನಾಡಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಮಕ್ಕಳಿಗೆ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವ ಕಾರ್ಯವಾಗಬೇಕು. ಅದು ಶಾಲೆಗಳಲ್ಲಿ ನಡೆಯಬೇಕು. ಸಾಂಸ್ಕೃತಿಕ ಪ್ರಜ್ಞೆಯುಳ್ಳ ವ್ಯಕ್ತಿ ದೇಶದ ಸಂಪತ್ತು ಎಂದರು.


ಆಳ್ವಾಸ್ ವಿರಾಸತ್ ಮೂಲಕ ಜನತೆಗೆ ಮನರಂಜನೆ ಜೊತೆಗೆ ಉತ್ತಮ ಸಂದೇಶ ನೀಡುವುದು ಕಾರ್ಯಕ್ರಮದ ಆಶಯ ಎಂದರು.

ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.


ಅಮೆರಿಕಾದ ವರ್ಲ್ಡ್ ರಿಲೀಜಿಯಸ್ ಫಾರ್ ಪೀಸ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಡಾ.ವಿಲಿಯಂ ಎಫ್. ವಿಂಡ್ಲೆ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಡಾ. ಶಿವರಾಮ ಶೆಟ್ಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಆಬೀದ್ ಗದ್ಯಾಳ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮ ಮುಖ್ಯ ಅತಿಥಿಗಳಾಗಿದ್ದರು.



ಪ್ರಮುಖರಾದ ಡಾ.ಜಿ. ಶಂಕರ್, ಕೆ.ರಘುಪತಿ ಭಟ್, ಪ್ರಸಾದ್ ರಾಜ್ ಕಾಂಚನ್, ಡಾ.ಕಿರಣ್ ಆಚಾರ್ಯ, ಡಾ.ರವಿರಾಜ್ ಆಚಾರ್ಯ, ಹರಿಪ್ರಸಾದ್ ರೈ, ಸುಪ್ರಸಾದ್ ಶೆಟ್ಟಿ, ಶಂಭು ಶೆಟ್ಟಿ, ನಾಗೇಶ್ ಹೆಗ್ಡೆ, ವಿಶ್ವನಾಥ್ ಶೆಣೈ, ಕುತ್ಯಾರು ನವೀನ್ ಶೆಟ್ಟಿ, ಮನೋಹರ್ ಶೆಟ್ಟಿ, ಸಾಧು ಸಾಲ್ಯಾನ್, ಗುಜ್ಜಾಡಿ ಪ್ರಭಾಕರ ನಾಯಕ್, ಗಣನಾಥ ಎಕ್ಕಾರು, ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.


ಆಳ್ವಾಸ್ ನುಡಿಸಿರಿ ವಿರಾಸತ್ ಉಡುಪಿ ಘಟಕ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸ್ವಾಗತಿಸಿ, ಕಾರ್ಯದರ್ಶಿ ಭುವನ ಪ್ರಸಾದ್ ಹೆಗ್ಡೆ ಮಣಿಪಾಲ ವಂದಿಸಿದರು. ಆಳ್ವಾಸ್ ಕಾಲೇಜು ಕನ್ನಡ ವಿಭಾಗ ಮುಖ್ಯಸ್ಥ ಹಾಗೂ ಕಸಾಪ ಮೂಡುಬಿದಿರೆ ಘಟಕ ಅಧ್ಯಕ್ಷ ಡಾ.ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.


500 ಮಂದಿಯಿಂದ ಕಲಾವೈಭವ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 500ಕ್ಕೂ ಅಧಿಕ ವಿದ್ಯಾರ್ಥಿ ಕಲಾವಿದರಿಂದ ಭಾರತೀಯ ಕಲಾಪ್ರಕಾರಗಳಾದ ಯೋಗ ದೀಪಿಕಾ, ಶಾಸ್ತ್ರೀಯ ನೃತ್ಯ- ಅಷ್ಟಲಕ್ಷ್ಮಿ, ಬಡಗುತಿಟ್ಟು ಯಕ್ಷಗಾನ, ಶಂಕರಾರ್ಧ ಶರೀರಿಣಿ, ಗುಜರಾತಿನ ದಾಂಡಿಯ ನೃತ್ಯ, ಮಣಿಪುರಿ ಸ್ಟಿಕ್ ಡಾನ್ಸ್, ಮಲ್ಲಕಂಬ ಹಾಗೂ ಕಸರತ್ತು, ಸೃಜನಾತ್ಮಕ ನೃತ್ಯ, ಡೊಳ್ಳು ಕುಣಿತ, ಕಥಕ್ ವರ್ಷಧಾರೆ, ಪುರುಲಿಯಾ ಸಿಂಹ ನೃತ್ಯ, ತೆಂಕುತಿಟ್ಟು ಯಕ್ಷಗಾನ ಹಿರಣ್ಯಾಕ್ಷ ವಧೆ, ಬೊಂಬೆ ವಿನೋದಾವಳಿಯ ಪ್ರದರ್ಶನ ನಡೆಯಿತು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಆಳ್ವಾಸ್ ವಿದ್ಯಾರ್ಥಿಗಳಿಂದ ಸಿಂಗಾರಿ ಮೇಳ ಫ್ಯೂಷನ್ ನಡೆಯುತು. ಬೊಂಬೆ ವಿನೋದಾವಳಿಯೊಂದಿಗೆ ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಏರ್ಪಾಡಾಗಿತ್ತು.