ಲೋಕಬಂಧು ನ್ಯೂಸ್, ಉಡುಪಿ
ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ದ್ವೈವಾರ್ಷಿಕ ಕೃಷ್ಣಪೂಜಾ ಪರ್ಯಾಯ ಅಂಗವಾಗಿ ನಡೆಯುವ ಪರ್ಯಾಯ ಪೂರ್ವ ವಿಧಿಗಳಲ್ಲಿ ಕೊನೆಯದಾದ ಧಾನ್ಯ ಮುಹೂರ್ತ ಭಾನುವಾರ ಬೆಳಿಗ್ಗೆ 7.45ರ ಧನುರ್ಲಗ್ನ ಸುಮುಹೂರ್ತದಲ್ಲಿ ಕೃಷ್ಣಮಠದ ಬಡಗು ಮಾಳಿಗೆಯಲ್ಲಿ ನಡೆಯಿತು.
ಬೆಳಿಗ್ಗೆ 6.45 ಗಂಟೆಗೆ ಶೀರೂರು ಮಠದಲ್ಲಿ ಪ್ರಾರ್ಥನೆ ಸಲ್ಲಿಸಿ ಅನಂತೇಶ್ವರ, ಚಂದ್ರಮೌಳೇಶ್ವರ ದೇವರ ದರ್ಶನದ ಬಳಿಕ ಶ್ರೀಕೃಷ್ಣ-ಮುಖ್ಯಪ್ರಾಣ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ಗರುಡದೇವರು, ಸುಬ್ರಹ್ಮಣ್ಯ ದೇವರು, ನವಗ್ರಹ ಹಾಗೂ ವೃಂದಾವನ ದರ್ಶನದ ಬಳಿಕ ಮತ್ತೆ ಶೀರೂರು ಮಠಕ್ಕೆ ಆಗಮಿಸಲಾಯಿತು.
ಚಿನ್ನದ ಪಲ್ಲಕಿಯಲ್ಲಿ ಭತ್ತದ ಮುಡಿ ಸಹಿತ ನೂರಾರು ಭಕ್ತರು ತಲೆಯಲ್ಲಿ ಭತ್ತದ ಮುಡಿಗಳನ್ನು ಹೊತ್ತು ನಡೆದರು. ಧಾನ್ಯ ಸಂಗ್ರಹಣೆ ಹಿನ್ನೆಲೆಯ ಆಶಯದಲ್ಲಿ ವಾದ್ಯಮೇಳಗಳೊಂದಿಗೆ ನಡೆದ ಭತ್ತದ ಮುಡಿಗಳ ಮೆರವಣಿಗೆ ರಥಬೀದಿಯಲ್ಲಿ ಒಂದು ಸುತ್ತು ಬಂದು ಕೃಷ್ಣ ಮಠ ಪ್ರವೇಶಿಸಿ ಕೃಷ್ಣಮಠದ ಆಡಳಿತ ಕಚೇರಿ ಇರುವ ಬಡಗು ಮಾಳಿಗೆಯಲ್ಲಿ ಭತ್ತದ ಮುಡಿಗಳನ್ನಿಟ್ಟು ಪೂಜಿಸಲಾಯಿತು. ಕಂಬ್ಳಕಟ್ಟ ಗಿರಿರಾಜ ಉಪಾಧ್ಯಾಯ ಧಾರ್ಮಿಕ ವಿಧಿ ನೆರವೇರಿಸಿದರು.
ಧಾನ್ಯ ಸಂಗ್ರಹದ ಮುಹೂರ್ತ
ಅನ್ನಬ್ರಹ್ಮ ಕೃಷ್ಣನ ಸನ್ನಿಧಿಯಲ್ಲಿ ಭಕ್ತರಿಗೆ ಅನ್ನಪ್ರಸಾದ ನೀಡುವುದೂ ಉಡುಪಿಗೆ ವಿಶಿಷ್ಟವಾದುದು. ಈ ಹಿನ್ನೆಲೆಯಲ್ಲಿ ಪರ್ಯಾಯ ಪೂರ್ವಭಾವಿಯಾಗಿ ಬಾಳೆ ಮುಹೂರ್ತ, ಕಟ್ಟಿಗೆ ಮುಹೂರ್ತ, ಅಕ್ಕಿ ಮುಹೂರ್ತದ ತರುವಾಯ ಧಾನ್ಯ (ಭತ್ತ) ಮುಹೂರ್ತ ನಡೆಸುವುದು ಸಂಪ್ರದಾಯ.
ಅರಳು ಮತ್ತು ಅಕ್ಕಿಗಾಗಿ ಭತ್ತ ಸಂಗ್ರಹಣೆ ಈ ಕಾರ್ಯಕ್ರಮದ ಹಿಂದಿನ ಆಶಯ. ಜೊತೆಗೆ ಸಂಗ್ರಹಿಸಿದ ಭತ್ತವನ್ನು ಕೃಷ್ಣಮಠದ ಬಡಗು ಮಾಳಿಗೆಯಲ್ಲಿ ದಾಸ್ತಾನು ಮಾಡುವ ಮೂಲಕ ಎರಡು ವರ್ಷಗಳ ಕಾಲ ಭಕ್ತರ ಉಟೊಪಚಾರಕ್ಕೆ ಸಿದ್ಧತೆ ನಡೆಸುವುದು ಮಾತ್ರವಲ್ಲದೆ, ಒಂದರ್ಥದಲ್ಲಿ ಭಾವಿ ಪರ್ಯಾಯ ಮಠದವರು ಕೃಷ್ಣಮಠ ಪ್ರವೇಶಿಸುವ ಸಂದರ್ಭವೂ ಆಗಿದೆ. ಜೊತೆಗೆ ಭಕ್ತರು ತಾವು ಬೆಳೆದ ಫಸಲಿನ ಒಂದಂಶವನ್ನು ಭಗವಂತನಿಗೆ ಸಮರ್ಪಿಸಿ, ಕೃತಾರ್ಥರಾಗಲು ಇದೊಂದು ಸದವಕಾಶ.
ಜ.18ರಂದು ಪರ್ಯಾಯ ಮಹೋತ್ಸವ ನಡೆಯಲಿದೆ ಎಂದು ದಿವಾನ ಡಾ. ಉದಯ ಕುಮಾರದ ಸರಳತ್ತಾಯ ವಿವರಿಸಿದರು.
ಬಳಿಕ ಕಟ್ಟಿಗೆ ರಥದ ಶಿಖರ ಕಲಶ ಪ್ರತಿಷ್ಠೆಯನ್ನೂ ನಡೆಸಲಾಯಿತು.
ಈ ಸಂದರ್ಭದಲ್ಲಿ ಭಾವಿ ಪರ್ಯಾಯ ಶೀರೂರು ಮಠದ ದಿವಾನ ಡಾ.ಉದಯ ಸರಳತ್ತಾಯ, ಮಠದ ಪಾರುಪತ್ಯಗಾರ ಶ್ರೀಶ ಭಟ್ ಕೊಡವೂರು, ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಕಟೀಲು ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತು ಗೋಪಾಲಕೃಷ್ಣ ಆಸ್ರಣ್ಣ, ಪ್ರಮುಖರಾದ ಪ್ರೊ.ಎಂ.ಬಿ.ಪುರಾಣಿಕ್, ಪ್ರದೀಪ್ ಕುಮಾರ್ ಕಲ್ಕೂರ, ಇಂದ್ರಾಳಿ ಜಯಕರ ಶೆಟ್ಟಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಭುವನಾಭಿರಾಮ ಉಡುಪ ಕಿನ್ನಿಗೋಳಿ, ಕೆ.ಶ್ರೀಪತಿ ಭಟ್ ಮೂಡುಬಿದಿರೆ, ರಘುಪತಿ ರಾವ್ ಕಿನ್ನಿಮೂಲ್ಕಿ, ಭಾಸ್ಕರ ರಾವ್ ಕಿದಿಯೂರು, ವಿಜಯ ರಾಘವ ರಾವ್, ಪರ್ಯಾಯ ಸಮಿತಿಯ ಸುಪ್ರಸಾದ್ ಶೆಟ್ಟಿ, ಮೋಹನ ಭಟ್, ನಂದನ್ ಜೈನ್, ಮಧುಕರ್ ಮುದ್ರಾಡಿ, ವಿಷ್ಣು ಪ್ರಸಾದ್ ಪಾಡಿಗಾರ್, ವಾಸುದೇವ ಆಚಾರ್ಯ ಮೊದಲಾದವರಿದ್ದರು.
.jpg)
.jpg)