ಅಧಿವೇಶನ ಮುಗಿಯುವುದರೊಳಗೆ ಬೆಳಗಾವಿ ವಿಂಗಡಿಸಿ

ಲೋಕಬಂಧು ನ್ಯೂಸ್, ಬೆಳಗಾವಿ
ಚಳಿಗಾಲದ ಅಧಿವೇಶನ ಮುಗಿಯುವುದರೊಳಗೆ ಬೆಳಗಾವಿಜಿಲ್ಲೆಯನ್ನು ವಿಂಗಡಿಸಿ, ಆಡಳಿತಾತ್ಮಕ ದೃಷ್ಟಿಯಿಂದ ಗೋಕಾಕ ಮತ್ತು ಚಿಕ್ಕೋಡಿ ಹೊಸ ಜಿಲ್ಲಾ ಕೇಂದ್ರಗಳನ್ನಾಗಿ ಮಾಡುವ ಕುರಿತು ನಿರ್ಣಯ ಕೈಗೊಳ್ಳುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸರ್ಕಾರವನ್ನು ಒತ್ತಾಯಿಸಿದರು.ಇಲ್ಲಿನ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಗಳವಾರ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಪ್ರತ್ಯೇಕ ಗೋಕಾಕ ಜಿಲ್ಲೆ ಸಂಬಂಧ ಮಠಾಧೀಶರು ಮತ್ತು ಹೋರಾಟ ಸಮಿತಿ ಸದಸ್ಯರ ನಿಯೋಗ ಈಗಾಗಲೇ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ ಎಂದರು.


ಜಿಲ್ಲೆಗಳ ಪುನರ್ವಿಂಗಡಣೆ ಸಂಬಂಧ ಆಗಿನ‌ ಸರ್ಕಾರಗಳು ರಚಿಸಿದ್ದ ಎಲ್ಲ ಆಯೋಗಗಳು ಗೋಕಾಕ ಮತ್ತು ಚಿಕ್ಕೋಡಿ ಜಿಲ್ಲಾ ಕೇಂದ್ರವಾಗಲು ಯೋಗ್ಯವಾಗಿದ್ದು, ಆಡಳಿತಾತ್ಮಕ ದೃಷ್ಟಿಯಿಂದ ಹೊಸ ಜಿಲ್ಲೆಗಳು ತಲೆ ಎತ್ತಬೇಕು ಎಂಬ ವರದಿಗಳನ್ನು ಆಗ ಅಸ್ತಿತ್ವದಲ್ಲಿದ್ದ ಸರ್ಕಾರಗಳಿಗೆ ಶಿಫಾರಸ್ಸು ಮಾಡಿ ತಮ್ಮ ವರದಿಗಳನ್ನು ಸಲ್ಲಿಕೆ ಮಾಡಿದ್ದವು ಎಂದು ನೆನಪಿಸಿದರು.


ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಮುಖ್ಯಮಂತ್ರಿ ಜಿಲ್ಲೆಯ ಎಲ್ಲ 18 ಶಾಸಕರು ಮತ್ತು ಮೂವರು ವಿಧಾನ ಪರಿಷತ್ ಸದಸ್ಯರ ಸಭೆ ಕರೆದು ನಿರ್ಣಯ ಮಾಡುವುದಾಗಿ ಹೇಳಿದ್ದಾರೆ. ವಿಧಾನ ಮಂಡಲ ಅಧಿವೇಶನ ಮುಗಿಯುವುದೊಳಗಾಗಿ ಜಿಲ್ಲಾ ರಚನೆ ಸಂಬಂಧ ಸ್ಪಷ್ಟ ನಿರ್ಣಯ ತೆಗೆದುಕೊಳ್ಳಬೇಕು ಎಂದಿದ್ದಾರೆ.


ಜಿಲ್ಲಾ ರಚನೆಗಾಗಿ ಕಳೆದ 40 ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಆದ್ದರಿಂದ ಜಿಲ್ಲೆಯ ಎಲ್ಲ ಶಾಸಕರ ಸಭೆ ಕರೆದು ಅಂತಿಮ ನಿರ್ಣಯ ಮಾಡುವಂತೆ ಸಭಾಧ್ಯಕ್ಷರ ಮೂಲಕ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಮುಖ್ಯಮಂತ್ರಿಯನ್ನು ಆಗ್ರಹಿಸಿದರು.