ಲೋಕಬಂಧು ನ್ಯೂಸ್, ಉಡುಪಿ
ವಿಧಾನಸಭೆ ಅಧಿವೇಶನದಲ್ಲಿ ಉಡುಪಿ ಪರ್ಯಾಯ ಮಹೋತ್ಸವಕ್ಕೆ ಅನುದಾನ ಬಗ್ಗೆ ಮಾತನಾಡಿದ ಸಂದರ್ಭದಲ್ಲಿ ಉಡುಪಿ ಬಿಜೆಪಿ ಶಾಸಕ ಯಶಪಾಲ್ ಸುವರ್ಣ ಮತ್ತು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ನಡುವೆ ನಡೆದ ಮಾತಿನ ಚಕಮಕಿ ಇದೀಗ ವ್ಯಾಪಕ ಟ್ರೋಲ್ ಆಗುತ್ತಿದ್ದು, ಕರಾವಳಿ ಭಾಗದಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಶಾಸಕರ ಹೇಳಿಕೆ ಮತ್ತು ಸ್ಪೀಕರ್ ನಡೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಅಧಿವೇಶನದಲ್ಲಿ ಮಾತನಾಡುವ ವೇಳೆ ಶಾಸಕ ಯಶಪಾಲ್ ಸುವರ್ಣ ಅವರು ಉಡುಪಿ ಪರ್ಯಾಯ ಮಹೋತ್ಸವಕ್ಕೆ ಅನುದಾನ ನೀಡುವಂತೆ ಪ್ರಶ್ನೆ ಮುಂದಿಟ್ಟಿದ್ದರು. ಆ ವೇಳೆ ಸಿಟ್ಟುಗೊಂಡ ಸ್ಪೀಕರ್ ಯು.ಟಿ.ಖಾದರ್, `ನಿಮ್ಮ ಹರಿಕಥೆ ನಿಲ್ಲಿಸಿ, ನೇರ ವಿಷಯಕ್ಕೆ ಬನ್ನಿ. ಟಿವಿಯಲ್ಲಿ ಕಾಣಿಸಿಕೊಳ್ಳಲು ಮಾತನಾಡಬೇಡಿ' ಎಂದು ಸೂಚಿಸಿದ್ದರು. ಸ್ಪೀಕರ್ ಅವರ ಆ ಮಾತುಗಳು ವಿವಾದಕ್ಕೆ ಕಾರಣವಾಗಿವೆ.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕ ಯಶಪಾಲ್ ಸುವರ್ಣ, `ಶಾಸಕನಾಗಿ ನನಗೆ ನನ್ನ ಕ್ಷೇತ್ರದ ಬಗ್ಗೆ ಮಾತನಾಡುವ ಸಂಪೂರ್ಣ ಹಕ್ಕಿದೆ. 15 ದಿನಗಳ ಮುಂಚಿತವಾಗಿ ನಾನು ಸಲ್ಲಿಸಿದ್ದ ಪ್ರಶ್ನೆ ಅದಾಗಿತ್ತು. ಉಡುಪಿ ಪರ್ಯಾಯ ಮಹೋತ್ಸವಕ್ಕೆ ಅನುದಾನ ಕೇಳಿದ್ದಕ್ಕಾಗಿ ಪೀಠದಿಂದ ಟೀಕಿಸಿರುವುದು ಸರಿಯಲ್ಲ.
ಪೀಠಕ್ಕೆ ಗೌರವ ನೀಡಿ ನಾನು ಮೌನವಾಗಿದ್ದೆ. ಆದರೆ, ಸ್ಪೀಕರ್ ಖಾದರ್ ಹಗುರವಾಗಿ, ಹಿಂದೂ ಧರ್ಮದ ಹರಿಕಥೆ ಬಗ್ಗೆ ಮಾತನಾಡಿದ್ದು ನೋವುಂಟು ಮಾಡಿದೆ' ಎಂದು ಯಶಪಾಲ್ ಹೇಳಿದರು.
`ನಾನು ಎಂದಿಗೂ ದಾರಿ ತಪ್ಪುವ ಚರ್ಚೆ ಮಾಡಿಲ್ಲ. ಅನೇಕ ಶಾಸಕರು ಒಂದೊಂದು ಗಂಟೆ ಮಾತನಾಡುತ್ತಾರೆ. ಉಡುಪಿ ಹಿಂದುತ್ವದ ಜಿಲ್ಲೆ ಎಂಬುದು ಖಾದರ್ ಅವರಿಗೆ ಗೊತ್ತಿದೆ. ಇಲ್ಲಿನ ಅಭಿವೃದ್ಧಿ ಹಾಗೂ ಪರ್ಯಾಯ ಮಹೋತ್ಸವದ ವಿಚಾರ ಬಂದಾಗ ಟೀಕಿಸಿರುವುದು ಸರಿಯಲ್ಲ' ಎಂದವರು ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೆ, `ನಾನು ಕಾರ್ಯಕರ್ತನಾಗಿ ಬೆಳೆದು ಶಾಸಕನಾಗಿದ್ದೇನೆ. ತಂದೆಯ ಹೆಸರಲ್ಲಿ ಮತ ಕೇಳಿ ಅವರು ಶಾಸಕರಾದವರು. ಈ ನಡೆಗಳಿಂದ ನಮ್ಮ ಕಾರ್ಯಕರ್ತರು ಬಹಳಷ್ಟು ನೊಂದಿದ್ದಾರೆ.
ಶನಿವಾರ ಪುತ್ತಿಗೆ ಶ್ರೀಗಳ ಕಾರ್ಯಕ್ರಮಕ್ಕೆ ಖಾದರ್ ಅವರು ಬರಬೇಕಿತ್ತು. ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಹಾಗೂ ಧಿಕ್ಕಾರಕ್ಕೆ ಸಿದ್ಧರಾಗಿದ್ದರು. ಆ ಕಾರಣದಿಂದ ಅವರು ಕಾರ್ಯಕ್ರಮಕ್ಕೆ ಬಂದಿಲ್ಲ' ಎಂದು ಆರೋಪಿಸಿದರು.
ಚಳಿಗಾಲದ ಅಧಿವೇಶನದ ಕುರಿತು ಮಾತನಾಡಿದ ಅವರು, `ಈ ಅಧಿವೇಶನದಲ್ಲಿ ಯಾರಿಗೆ ಚಳಿ ಬಿಡಿಸಬೇಕು ಎನ್ನುವುದು ನಮಗೆ ಗೊತ್ತು. ಖಾದರ್ ಓಲೈಕೆ ರಾಜಕೀಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾದರೆ ಸಚಿವ ಸ್ಥಾನ ಪಡೆಯುವ ಆಕಾಂಕ್ಷೆಯಲ್ಲಿದ್ದಾರೆ. ಹಿಂದುತ್ವದ ಬಗ್ಗೆ ಮಾತನಾಡುವ ಶಾಸಕರನ್ನು ಟೀಕಿಸಿದರೆ ಹೈಕಮಾಂಡ್ ಗಮನ ಸೆಳೆಯಬಹುದು ಎಂಬ ಉದ್ದೇಶದಿಂದ ಈ ರೀತಿ ವರ್ತಿಸಿದ್ದಾರೆ ಎಂದು ಟೀಕಿಸಿದ ಶಾಸಕ ಯಶಪಾಲ್, ಈ ಬಗ್ಗೆ ಉಡುಪಿ ಜನತೆಯ ಬಳಿ ಸ್ಪೀಕರ್ ಯು.ಟಿ. ಖಾದರ್ ಕ್ಷಮೆ ಯಾಚಿಸಬೇಕು.
ಪರ್ಯಾಯಕ್ಕೆ ಅನುದಾನ ಕೇಳಿದಾಗ ಟೀಕಿಸಿರುವುದು ಸರಿಯಲ್ಲ. ಕಳೆದ ಮೂರು ಮಳೆಗಾಲಗಳಲ್ಲಿ ದಾಖಲೆ ಪ್ರಮಾಣದ ಮಳೆಯಾಗಿ ನಗರದ ರಸ್ತೆಗಳು, ಚರಂಡಿಗಳು ಕೊಚ್ಚಿ ಹೋಗಿವೆ. ಸರಕಾರದಿಂದ ಸೂಕ್ತ ಅನುದಾನ ಬಂದಿಲ್ಲ. ಜನರು ನನ್ನನ್ನು ಆಯ್ಕೆ ಮಾಡಿರುವುದು ಜನಸೇವೆ ಮಾಡಲು ಎಂದು ಶಾಸಕ ಯಶಪಾಲ್ ಸುವರ್ಣ ಹೇಳಿದರು.
