ಲೋಕಬಂಧು ನ್ಯೂಸ್, ಲಾತೂರ್
ಕೇಂದ್ರ ಮಾಜಿ ಗೃಹ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ವಿಠಲ ರಾವ್ ಪಾಟೀಲ್ (90 ವ.) ಶುಕ್ರವಾರ ಬೆಳಗ್ಗೆ ಮಹಾರಾಷ್ಟ್ರದ ಲಾತೂರಿನಲ್ಲಿ ನಿಧನರಾದರು.
ಅವರು ವಯೋಸಹಜ ಅಸೌಖ್ಯದಿಂದ ಅಲ್ಪಕಾಲದಿಂದ ಬಳಲುತ್ತಿದ್ದು ಸ್ವಗೃಹ ‘ದೇವ್‌ಘರ್’ನಲ್ಲಿ ಕೊನೆಯುಸಿರೆಳೆದರು.
ಶಿವರಾಜ್ ಪಾಟೀಲ್ ಹಲವು ದಶಕಗಳ ಸಾರ್ವಜನಿಕ ಬದುಕಿನಲ್ಲಿ ಅತ್ಯುನ್ನತ ಹುದ್ದೆಗಳನ್ನು ನಿರ್ವಹಿಸಿದ್ದರು. 2004ರಿಂದ 2008ರ ವರೆಗೆ ಭಾರತದ ಕೇಂದ್ರ ಗೃಹ ಸಚಿವರಾಗಿದ್ದ ಅವರು 1991–1996ರ ಅವಧಿಯಲ್ಲಿ ಲೋಕಸಭೆಯ ಸ್ಪೀಕರ್, 2010–2015 ಪಂಜಾಬ್ ರಾಜ್ಯಪಾಲ ಜೊತೆಗೆ ಚಂಡೀಗಢ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯಾಗಿದ್ದರು.
ಲಾತೂರ್ ಲೋಕಸಭಾ ಕ್ಷೇತ್ರವನ್ನು ಏಳು ಬಾರಿ ಗೆದ್ದಿರುವುದು ಪಾಟೀಲ್ ಜನಪ್ರಿಯತೆ ಮತ್ತು ಆಡಳಿತ ಸಾಮರ್ಥ್ಯಕ್ಕೆ ಸಾಕ್ಷಿ. 70ರ ದಶಕದಲ್ಲಿ ಪುರಸಭೆಯ ಮುಖ್ಯಸ್ಥರಾಗಿ ರಾಜಕೀಯಕ್ಕೆ ಪ್ರವೇಶಿಸಿದ ಅವರು, ನಂತರ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರಮುಖ ಪಾತ್ರ ವಹಿಸಿದರು.
ತನ್ನ ಶಿಷ್ಟ ನಡವಳಿಕೆ, ಸ್ಪಷ್ಟ ಮಾತು, ಆಳ ಅಧ್ಯಯನ ಮತ್ತು ಸಾಂವಿಧಾನಿಕ ವಿಷಯಗಳ ಮೇಲಿನ ಹಿಡಿತಕ್ಕಾಗಿ ಅವರು ಪ್ರಸಿದ್ಧರಾಗಿದ್ದರು. ಮರಾಠಿ, ಹಿಂದಿ, ಇಂಗ್ಲಿಷ್ ಭಾಷೆಗಳಲ್ಲಿನ ಅವರ ಪಾಂಡಿತ್ಯ ಮತ್ತು ಸಂಸದೀಯ ವ್ಯವಸ್ಥೆಯ ಆಳವಾದ ಅರಿವು ಅವರನ್ನೊಬ್ಬ ಅತ್ಯಂತ ಗೌರವಾನ್ವಿತ ನಾಯಕನನ್ನಾಗಿ ಮಾಡಿತ್ತು.
ಪಾಟೀಲ್ ಅವರು ಪುತ್ರ ಶೈಲೇಶ್ ಪಾಟೀಲ್, ಸೊಸೆ ಬಿಜೆಪಿ ನಾಯಕಿ ಅರ್ಚನ ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಪ್ರಧಾನಿ ಸಂತಾಪ
ಶಿವರಾಜ್ ಪಾಟೀಲ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ಶಿವರಾಜ್ ಪಾಟೀಲ್ ನಿಧನ ದಿಗ್ಭ್ರಮೆ ಉಂಟುಮಾಡಿದೆ. ಅವರು ಅನುಭವಿ ಮತ್ತು ಗೌರವಾನ್ವಿತ ನಾಯಕ, ಶಾಸಕ, ಸಂಸದ, ಕೇಂದ್ರ ಸಚಿವ, ಸ್ಪೀಕರ್ ಹಾಗೂ ರಾಜ್ಯಪಾಲರಾಗಿ ಸದಾಕಾಲವೂ ಸಮಾಜದ ಕಲ್ಯಾಣಕ್ಕೆ ಶ್ರಮಿಸಿದ್ದಾರೆ. ಅವರ ಕುಟುಂಬಕ್ಕೆ ಈ ದುಃಖ ಸಹಿಸುವ ಶಕ್ತಿ ದೊರೆಯಲಿ ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
