ಲೋಕಬಂಧು ನ್ಯೂಸ್, ಉಡುಪಿ
ಗುರು ಮುಖೇನ ಕಲಿತ ವಿದ್ಯೆಯಿಂದ ಶ್ರೇಯಸ್ಸು ಪ್ರಾಪ್ತಿಯಾಗುತ್ತದೆ ಎಂದು ಎಸ್.ಡಿ.ಎಂ. ಆಯುರ್ವೇದ ಕಾಲೇಜು ಪ್ರಾಂಶುಪಾಲೆ ಡಾ.ಮಮತ ಕೆ.ವಿ. ಅಭಿಪ್ರಾಯ ವ್ಯಕ್ತಪಡಿಸಿದರು.ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ 28ನೇ ಶಿಷ್ಯೋಪನಯನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗುರು ಮುಖೇನ ವಿದ್ಯೆ ಕಲಿಯುವ ವಿಧಾನವನ್ನು ಪರಂಪರಾಗತವಾಗಿ ಅನುಸರಿಸಿಕೊಂಡು ಬಂದಿದ್ದು, ಪ್ರಸ್ತುತ ಇಂದಿನ ದಿನಗಳಲ್ಲೂ ಆಯುರ್ವೇದ ಕ್ಷೇತ್ರದಲ್ಲಿ ಯಶಸ್ಸು ಗಳಿಸಲು ಪರಿಣತ ವೈದ್ಯ ಶಿಕ್ಷಕರ ಮಾರ್ಗದರ್ಶನ ಅಗತ್ಯ ಮತ್ತು ಅಮೂಲ್ಯವಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಮೈಸೂರು ಜೆ.ಎಸ್.ಎಸ್. ಆಯುರ್ವೇದ ಮಹಾವಿದ್ಯಾಲಯ ನಿವೃತ್ತ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಗುರು ಬಸವರಾಜ ಅವರು ಶಿಷ್ಯೋಪನಯನ ಸಂಸ್ಕಾರದ ಪ್ರಾಮುಖ್ಯತೆ ತಿಳಿಸಿದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ಸ್ವಾಗತಿಸಿದರು. ಆಡಳಿತ ವಿಭಾಗ ಮುಖ್ಯಸ್ಥ ಪ್ರಶಾಂತ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ಬೋಧನೆ ನೆರವೇರಿಸಿದರು. ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್, ಕಾರ್ಯಕ್ರಮ ಸಂಯೋಜಕ ಡಾ. ರಜನೀಶ್ ಗಿರಿ ಉಪಸ್ಥಿತರಿದ್ದರು.
ಸ್ನಾತಕ ವಿಭಾಗದ ಮುಖ್ಯಸ್ಥ, ಡೀನ್ ಪೃಥ್ವಿರಾಜ್ ಪುರಾಣಿಕ್ ವಂದಿಸಿದರು. ಕೌಮಾರಭೃತ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಕಾವ್ಯ, ಅಗದತಂತ್ರ ವಿಭಾಗದ ಡಾ. ಶುಭಾ ಪಿ. ಯು. ಕಾರ್ಯಕ್ರಮ ನಿರೂಪಿಸಿದರು.