ಲೋಕಬಂಧು ನ್ಯೂಸ್, ಬೆಳಗಾವಿ
ರಾಜ್ಯದಲ್ಲಿ ಇನ್ನು ಮುಂದೆ ದ್ವೇಷ ಭಾಷಣ ಜಾಮೀನು ರಹಿತ ಅಪರಾಧ. ಅಲ್ಲದೇ ಗರಿಷ್ಠ 10 ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ.ವರೆಗೆ ದಂಡ ಎದುರಿಸಬೇಕಾಗುತ್ತದೆ.ದ್ವೇಷ ಭಾಷಣ ಮತ್ತು ಅಪರಾಧಗಳಿಗೆ ಕಡಿವಾಣ ಹಾಕುವ ಬಹು ವಿವಾದಿತ, `ಕರ್ನಾಟಕ ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ನಿಯಂತ್ರಣ’ ಮಸೂದೆಯನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದರು.
ರಾಜ್ಯದಲ್ಲಿ ದ್ವೇಷ ಭಾಷಣದ ಮೇಲೆ ನಿಯಂತ್ರಣ ಹೇರಲಾಗುವುದು ಎಂದು ಈ ಮೊದಲೇ ಘೋಷಿಸಿದಂತೆ ಕಾನೂನು ಅಸ್ತ್ರಕ್ಕೆ ಸರ್ಕಾರ ಮುಂದಾಗಿದೆ. ಪ್ರಸಕ್ತ ಸಿದ್ದರಾಮಯ್ಯ ಸರ್ಕಾರದ ಹೊಸ ಶಾಸನಗಳ ಪೈಕಿ ಇದು ಪ್ರತಿಪಕ್ಷದಿಂದ ಅತೀ ಹೆಚ್ಚು ಪ್ರತಿರೋಧ ಎದುರಿಸುವ ಲಕ್ಷಣಗಳಿವೆ.
ದ್ವೇಷ ಅಪರಾಧ ಎಸಗಿದರೆ ಕನಿಷ್ಠ ಒಂದು ವರ್ಷದಿಂದ ಏಳು ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು. ಜೊತೆಗೆ 50 ಸಾವಿರ ರೂ. ದಂಡ ಕಟ್ಟಬೇಕು. ಈ ಅಪರಾಧದಲ್ಲಿ ಪುನರಾವರ್ತನೆಯಾದಲ್ಲಿ, ಕನಿಷ್ಠ ಎರಡು ವರ್ಷಗಳಿಂದ ಗರಿಷ್ಠ 10 ವರ್ಷಗಳ ವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ. ದಂಡ ವಿಧಿಸಲಾಗುವುದು.
ಬಿಜೆಪಿ ವಿರೋಧ
ಮಸೂದೆ ಮಂಡನೆಗೆ ಪ್ರತಿಪಕ್ಷ ಬಿಜೆಪಿ ಭಾರೀ ವಿರೋಧ ಮಾಡಿ, ಘೋಷಣೆಗಳನ್ನು ಕೂಗಿತು. ಅಂಗೀಕಾರದ ಮಾತು ಬಿಡಿ, ಮಂಡನೆಗೂ ಸಮ್ಮತಿ ಇಲ್ಲ. ಇದರ ಮಂಡನೆ ಬೇಡವೇ ಬೇಡ' ಎಂದು ಬಿಜೆಪಿ ಶಾಸಕರು ಎದ್ದು ನಿಂತು ಕೂಗಿ ಹೇಳಿದರು. 'ಇದು ಕೇವಲ ಮಂಡನೆ. ಅಂಗೀಕರಿಸುವಾಗ ನಿಮ್ಮ ಅನಿಸಿಕೆಗಳಿಗೆ ಅವಕಾಶ’ ಎಂಬ ನಿಯಮವನ್ನು ಸ್ಪೀಕರ್ ಈ ಸದಸ್ಯರ ಗಮನಕ್ಕೆ ತಂದರು. ಒಪ್ಪದ ಬಿಜೆಪಿ ಮಂಡನೆ ಕೋರಿ `ಮತಕ್ಕೆ ಹಾಕಿ’ ಎಂದು ಪಟ್ಟುಹಿಡಿದರು. ಆದರೆ, ಸ್ಪೀಕರ್ ಧ್ವನಿಮತ ಆಧರಿಸಿ ಮಸೂದೆ ಮಂಡಿಸಿದರು.