ಲೋಕಬಂಧು ನ್ಯೂಸ್, ಉಡುಪಿ
ಮಾನವ ಹಕ್ಕು ಮತ್ತು ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಹಕ್ಕು ಮತ್ತು ಕರ್ತವ್ಯಗಳನ್ನು ಸಮಾನವಾಗಿ ನೋಡುವ ಮನೋಭಾವವನ್ನು ಎಲ್ಲರೂ ಹೊಂದಿದರೆ ಮಾತ್ರ ನಾಗರಿಕ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಉಳಿಯಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ಹೇಳಿದರು.
ಜಿಲ್ಲಾಡಳಿತ ಉಡುಪಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಡಾ.ಜಿ ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು, ರಾಷ್ಟ್ರೀಯ ಸೇವಾ ಯೋಜನೆ ಉಡುಪಿ ವಿಭಾಗ, ಕಾಲೇಜಿನ ಮಾನವ ಹಕ್ಕುಗಳ ಸಂಘ ಮತ್ತು ಐಕ್ಯೂಎಸಿ ಸಹಭಾಗಿತ್ವದೊಂದಿಗೆ ಬುಧವಾರ ನಡೆದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ, ವಿದ್ಯಾರ್ಥಿನಿಯರಿಗೆ ಮಾನವ ಹಕ್ಕು ಪ್ರಮಾಣ ವಚನ ಬೋಧಿಸಿ ಮಾತನಾಡಿದರು.
ಅಭ್ಯಾಗತರಾಗಿದ್ದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮನು ಪಟೀಲ್ ಬಿ.ವೈ., ಮಾನವ ಹಕ್ಕುಗಳು ದೈನಂದಿನ ಅಗತ್ಯತೆ ಆಗಿದೆ. ನಮ್ಮ ಹಕ್ಕುಗಳ ಜೊತೆಗೆ ಇತರರ ಹಕ್ಕುಗಳನ್ನು ಅರಿತು ಗೌರವಿಸಿ ಬದುಕುವುದನ್ನು ಕಲಿಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಮಾನವ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸುವುದು ಎಲ್ಲರ ಜವಾಬ್ದಾರಿ. ಸಮಾಜದಲ್ಲಿ ಎಲ್ಲರೂ ಒಬ್ಬರಿಗೊಬ್ಬರು ಸಮಾನರು. ಇಲ್ಲಿ ಯಾವುದೇ ತಾರತಮ್ಯಗಳಿಗೆ ಅವಕಾಶ ಮಾಡಿಕೊಡಬಾರದು ಎಂದರು.
ಸುರತ್ಕಲ್ ಗೋವಿಂದದಾಸ ಕಾಲೇಜು ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ.ಆಶಾಲತಾ ಪಿ. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಮಾನವ ಹಕ್ಕುಗಳ ಪ್ರಾಮುಖ್ಯತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಸೋಜನ್ ಕೆ.ಜಿ. ಮತ್ತು ಐಕ್ಯೂಎಸಿ ಸಂಚಾಲಕಿ ಪ್ರೊ.ಶ್ರೀಮತಿ ಅಡಿಗ ಇದ್ದರು.
ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಹಾಗೂ ಮಾನವ ಹಕ್ಕು ಸಂಘದ ಸಂಚಾಲಕ ಮಂಜುನಾಥ ಸ್ವಾಗತಿಸಿದರು. ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥ ಡಾ.ರಾಜೇಂದ್ರ ಕೆ. ನಿರೂಪಿಸಿ, ವಂದಿಸಿದರು.