ನಿವೃತ್ತ ಸಿಜೆಐ ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ್ದ ವಕೀಲನಿಗೆ ಚಪ್ಪಲಿ ಏಟು

ಲೋಕಬಂಧು ನ್ಯೂಸ್, ನವದೆಹಲಿ
ಸುಪ್ರೀಂ ಕೋರ್ಟ್‌ನ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ್ದ ವಕೀಲ ರಾಕೇಶ್ ಕಿಶೋರ್ ಮಂಗಳವಾರ ಇಲ್ಲಿನ ಕರ್ಕಾರ್ಡೂಮ ನ್ಯಾಯಾಲಯದ ಆವರಣದಲ್ಲಿ ಚಪ್ಪಲಿಯಿಂದ ಥಳಿತಕ್ಕೊಳಗಾದರು.ಆದರೆ, ದಾಳಿಕೋರನ ಗುರುತು ಮತ್ತು ದಾಳಿಯ ಹಿಂದಿನ ಕಾರಣ ಬಹಿರಂಗವಾಗಿಲ್ಲ.


ದೆಹಲಿಯ ಕರ್ಕಾರ್ಡೂಮ ನ್ಯಾಯಾಲಯ ಸಂಕೀರ್ಣದಲ್ಲಿ ಕೆಲವರು ತನ್ನ ಮೇಲೆ ದಾಳಿ ಮಾಡಿದ್ದಾರೆ ಎಂದು ರಾಕೇಶ್ ಕಿಶೋರ್ ಹೇಳಿಕೊಂಡಿದ್ದಾರೆ. ಹಲ್ಲೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.


ವೀಡಿಯೊದಲ್ಲಿ ರಾಕೇಶ್ ಕಿಶೋರ್ ತನ್ನ ಮೇಲೆ ಹಲ್ಲೆ ನಡೆಸುತ್ತಿರುವ ವ್ಯಕ್ತಿಯನ್ನು 'ನೀವು ಯಾರು? ನನ್ನನ್ನು ಏಕೆ ಹೊಡೆಯುತ್ತಿದ್ದೀರಿ?' ಎಂದು ಕೇಳುತ್ತಿರುವುದು ಕಂಡುಬರುತ್ತದೆ. ನಂತರ ಅವರು 'ಸನಾತನ ಧರ್ಮಕ್ಕೆ ಜಯ' ಎಂದು ಕೂಗುತ್ತಾರೆ. ಆದಾಗ್ಯೂ, ಈ ವಿಷಯದ ಬಗ್ಗೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.


ಆದರೆ, ಬಿ‌ಆರ್. ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ್ದ ಕಾರಣಕ್ಕೆ ರಾಕೇಶ್ ಕಿಶೋರ್ ಮೇಲೆ ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ.