ಅವಧೂತ ಸದ್ಗುರು ವೆಂಕಟಾಚಲ ದೇಶಿಕ

ಮಾರ್ಗಶೀರ್ಷ ಕೃಷ್ಣ ಷಷ್ಠಿ ಬುಧವಾರ 10-12-2025ರಂದು ಶ್ರೀ ವೆಂಕಟಾಚಲ ಅವಧೂತರ ಜಯಂತ್ಯುತ್ಸವ. ತನ್ನಿಮಿತ್ತ ಈ ಲೇಖನ.
ಸ್ವಾತ್ಮಾರಾಮ ನಿಜಾನಂದಂ
ಶೋಕ ಮೋಹ ವಿವರ್ಜಿತಮ್ |
ಸ್ಮರಾಮಿ ಮನಸಾ ನಿತ್ಯಂ
ವೆಂಕಟಾಚಲ ದೇಶಿಕಮ್ ||


1940ರಲ್ಲಿ ತರೀಕೆರೆ- ಕಡೂರಿನ ಮಧ್ಯ ಇರುವ ಕೂಡ್ಲೂರು ಶ್ರೀನಿವಾಸ ಸಾವಿತ್ರ ಮ್ಮನವರ ಆರನೇ ಮಗನಾಗಿ ವೆಂಕಟಾಚಲ ಜನಿಸಿದರು. ಅವರಿಗೆ ನಾಲ್ಕು ಜನ ಅಕ್ಕಂದಿರು ಒಬ್ಬಾಕೆ ತಂಗಿ ಮತ್ತು ಓರ್ವ ತಮ್ಮ ಇದ್ದರು. ಕ್ರಮೇಣ ಅವರು ಕೂಡ್ಲೂರಿನಿಂದ  ಸಖರಾಯಪಟ್ಟಣಕ್ಕೆ ಬಂದು ನೆಲೆಸಿ ವರ್ಷಗಳೇ ಕಳೆದವು. ಆ ಕಾಲಕ್ಕೆ ಶ್ರೀಮಂತ ಕುಟುಂಬವಾಗಿದ್ದ ಅವರ ಮನೆಯಲ್ಲಿ ಸರಳ ಜೀವನ. ಹಸಿದವರಿಗೆ ಅನ್ನದಾನ, ಬಡಬಗ್ಗರು- ವಿದ್ಯಾರ್ಥಿಗಳಿಗೆ ಪುಸ್ತಕ ಬಟ್ಟೆ ಹಣ ಸಹಾಯ ಮಾಡುವಲ್ಲಿ ಆ ಕುಟುಂಬ ಎತ್ತಿದ ಕೈ.


ವೆಂಕಟಾಚಲ ಅವರು ಬೆಂಗಳೂರು ನ್ಯಾಷನಲ್ ಕಾಲೇಜಿನಲ್ಲಿ ಡಿಗ್ರಿ ಓದುತ್ತಿದ್ದರು. ತಂದೆಯ ಅನಾರೋಗ್ಯದ ನಿಮಿತ್ತ ಓದನ್ನು ಅರ್ಧಕ್ಕೆ ನಿಲ್ಲಿಸಿ ಬಂದರು. ಅವರ ತಂದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಮೇಧಾವಿ.


ಮುಂದೆ ವೆಂಕಟಾಚಲ ಅವರ ವಿವಾಹ ಸಖರಾಯಪಟ್ಟಣದ ಪದ್ಮಾವತಿ ಎಂಬ ಕನ್ಯೆಯೊಂದಿಗೆ ನೆರವೇರಿತು. ಅವರಿಗೆ ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಮಗ. ತುಂಬು ಕುಟುಂಬ ಜೀವನ ನಡೆಸುತ್ತಿದ್ದರು. ಆದರೆ, ಅವರ ಮನಸ್ಸು ಸದಾ ಜೀವನದ ಘಟನೆಗಳ ಬಗ್ಗೆ ಕುರಿತು ಅವರಲ್ಲೇ ಪ್ರಶ್ನೆ ಕೇಳಿಕೊಳ್ಳುತ್ತಿತ್ತು. ಬಾಲ್ಯದಲ್ಲಿ ತಂದೆಯಿಂದ ಕೇಳಿದ ಭಾಗವತ ಕಥೆಗಳು ಸಾಕಷ್ಟು ಪ್ರಭಾವ ಬೀರಿತ್ತು. ಧ್ರುವ, ಪ್ರಹ್ಲಾದ, ಮಾರ್ಕಂಡೇಯರಂಥ ಬಾಲಭಕ್ತರ ಕಥೆಗಳಿಗೆ ಮಾರುಹೋಗಿದ್ದರು.


ತಂದೆ ಕಾಲವಾಗುವ ಮುನ್ನ ಹೇಳುತ್ತಿದ್ದ ಮಾತುಗಳು- 'ಕೇಳು ಮಗು ನಾಳೆ ನಿನ್ನ ಮನೆ ಬಾಗಿಲಿಗೆ  ನೊಂದು ಪರಿಹಾರ ಪಡೆಯಲು ಹಲವಾರು ಜನರು ಬಂದು ಹೋಗಿ ಮಾಡುತ್ತಾರೆ. ಅವರೆಂದೂ ಬರಿಗೈಯಲ್ಲಿ ಹೋಗಬಾರದು. ಇನ್ನು ಮುಂದಿನ ಎಲ್ಲಾ ಹೊಣೆಗಾರಿಕೆ ನಿನ್ನದು' ಎಂದು ಹೇಳಿದ್ದರು. ತಂದೆಯ ಮರಣದ ನಂತರ ವೆಂಕಟಾಚಲ ಅವರು ಇದೇ ಮಾತನ್ನು  ಜೀವನದ ಕೊನೆಯ ವರೆಗೂ ನಡೆಸಿಕೊಂಡು ಬಂದರು.


ಅವರ ಮನೆಯ ಮುಂದಿನ ರಸ್ತೆಯಲ್ಲಿ ಹಸಿವಿನಿಂದ ಯಾವ ಜೀವಿಗಳು ಹೋದ ಉದಾಹರಣೆಯೇ ಇಲ್ಲ. ಮನುಷ್ಯರಿರಲಿ, ಪ್ರಾಣಿ ಪಶು ಪಕ್ಷಿಗಳಿಗೂ ಅವರ ಮನೆಯ ಮುಂದೆ ನೀರಿನ ತೊಟ್ಟಿಯಲ್ಲಿ ಹಸು ಕರುಗಳಿಗೆ ಕುಡಿಯಲು ನೀರು ಇರುತ್ತಿತ್ತು. ಹಾಗೆಯೇ ಮರದ ಕೆಳಗೆ  ಮೇವು ಹಾಕಿರುತ್ತಿದ್ದರು. ಪಶು ಪಕ್ಷಿಗಳಿಗೆ ಧವಸ ಧಾನ್ಯಗಳನ್ನು ಇಟ್ಟಿರುತ್ತಿದ್ದರು. ಮನೆಗೆ ಬಂದವರನ್ನು ಎಂದೂ ಬರಿಗೈಯಲ್ಲಿ ಕಳಿಸುತ್ತಿರಲಿಲ್ಲ. ಯಾವಾಗಲೂ ಹಣ್ಣು- ಹಂಪಲು, ಸಿಹಿತಿಂಡಿಗಳು ಇರುತ್ತಿದ್ದು, ಬಂದವರಿಗೆಲ್ಲ ಹಂಚುತ್ತಿದ್ದರು. ಬೇಸಿಗೆ ಬಂದಾಗ ಬಿಸಿಲಲ್ಲಿ ಬಂದವರಿಗೆ ಕುಡಿಯಲು ಮಜ್ಜಿಗೆ, ಬೆಲ್ಲ ನೀರು, ಪಾನಕ ಕೊಡುತ್ತಿದ್ದರು.


ಹೀಗೆ ನಡೆಯುತ್ತಿದ್ದಾಗ ಒಬ್ಬ ವ್ಯಕ್ತಿ 'ಗುರುವರ್ಯಾ ನಿಮ್ಮ ಮನೆಯಲ್ಲಿ ದಿನವೂ ವ್ರತ ಕಥೆ ಪೂಜೆ ಏನಾದರೂ ನಡೆಯುತ್ತಿದೆಯೇ? ಎಂದು ಕೇಳಿದ. ಅದಕ್ಕೆ ಗುರುನಾಥರು ನನ್ನದೆಂಥದಯ್ಯಾ ವ್ರತ ಕಥೆ ಪೂಜೆ? ಈಗ ಮಾಡುತ್ತಿರುವುದೇ ಹೋಮ ಹವನ ಯಜ್ಞ ಯಾಗ. ಎಲ್ಲಾ  ಇದೇ ಆಗಿದೆ ಎಂದು ನಗುತ್ತಾ  'ಸುಲಭ ಪೂಜೆಯ ಮಾಡಿ ಫಲವಿಲ್ಲದವರುಂಟೆ' ಎಂದು ಕೇಳಿದರು.


ಅವರು ಪ್ರತಿದಿನ 15ರಿಂದ 20 ಲೀ. ಹಾಲು ತೆಗೆದುಕೊಂಡು ಬೀದಿಯಲ್ಲಿ ನಡೆದು ಹೋಗುವವರಿಗೆಲ್ಲ  ಹಂಚುತಿದ್ದರು!


ಸದ್ಗುರುಗಳ ದರ್ಶನಕ್ಕಾಗಿ, ಸಮಸ್ಯೆಗಳನ್ನು ಹೊತ್ತು ಬಂದವರಿಗೆ ಗುರುಗಳ ದರ್ಶನವಾಗುತ್ತಿದ್ದಂತೆ ಸಮಸ್ಯೆಗಳೇ ಕಳೆದುಹೋಗಿ ಅವ್ಯಕ್ತ ಆನಂದ ಅನುಭವಿಸುತ್ತಿದ್ದರು. ಗುರುನಾಥರ ದರ್ಶನ ಮಾಡಿದವರಿಗೆಲ್ಲ ಸಮಸ್ಯೆಗಳು ಮಾಯವಾಗುತ್ತಿತ್ತು.


ಅವರ ಮನೆಯ ಪಕ್ಕದಲ್ಲಿ ಸೀಬೆಹಣ್ಣಿನ ಮರವಿತ್ತು. ಮರದ ತುಂಬಾ ಸೀಬೆಹಣ್ಣುಗಳು ತುಂಬಿದ್ದವು. ಪ್ರತಿನಿತ್ಯ ಅದೇ ದಾರಿಯಲ್ಲಿ ಹೋಗುತ್ತಿದ್ದ ಶಾಲೆಯ ಬಾಲಕನೊಬ್ಬ ಮರದಲ್ಲಿದ್ದ ಸೀಬೆಹಣ್ಣುಗಳನ್ನು ಆಸೆಗಣ್ಣಿನಿಂದ ನೋಡಿ ಹೋಗುತ್ತಿದ್ದ. ಮರುದಿನವೇ ಆ ಹುಡುಗ ಓದುತ್ತಿದ್ದ ಶಾಲೆಯ ಸುಮಾರು 350 ಮಕ್ಕಳಿಗೂ ಸೀಬೆಹಣ್ಣನ್ನು ಹಂಚಲಾಯಿತು.


ಆ ಊರಿನಲ್ಲಿ ಒಂದು ಭಜನೆ ತಂಡವಿತ್ತು. ಅದರಲ್ಲಿ ಗುರುನಾಥರ ಸಂಬಂಧಿಕರು ಬಹಳಷ್ಟು ಜನ ಇದ್ದರು. ಒಂದೊಂದು ದಿನ ಒಂದೊಂದು ಮನೆಯಲ್ಲಿ ಭಜನೆ ನಡೆಯುತ್ತಿದ್ದು, ಒಮ್ಮೆ ಗುರುನಾಥರ ಮನೆಗೂ ಭಜನೆಗೆ ಬಂದಿದ್ದರು. ಭಜನಾ ತಂಡದ ಜೊತೆ ಆ ಬಾಲಕನೂ ಬಂದಿದ್ದ.


ಗುರುನಾಥರು ಆ ಬಾಲಕನ ತಂದೆಯ ಹತ್ತಿರ ಒಂದು ಸಾವಿರ ರೂಪಾಯಿ ಸಾಲ ಪಡೆದಿದ್ಧರು. ಅವರಿಗೆ ತಕ್ಷಣ ಕೊಡಲು ಆಗಿರಲಿಲ್ಲ. ಹುಡುಗನ ತಾಯಿ ತನ್ನ ಪತಿಗೆ ಗುರುನಾಥರಲ್ಲಿ ಹಣ ವಾಪಸ್ಸು ಕೊಡುವಂತೆ ಕೇಳಿ ಎನ್ನುತ್ತಿದ್ದಳು. ಆದರೆ, ಆತನಿಗೆ ಹಣ ಕೇಳುವುದು ಇಷ್ಟ ಇರಲಿಲ್ಲ. ಆ ದಿನ ಭಜನೆಗೆ ಬಂದಾಗ ಆ ವ್ಯಕ್ತಿ ಬಂದಿದ್ದ. ಗುರುನಾಥರು ಅವನನ್ನು ಕರೆದು ಚಿಂತಿಸಬೇಡ, ನಿನ್ನ ಹೆಂಡತಿ ಹಣ ಕೇಳಲು ಹೇಳುತ್ತಿದ್ದಾಳೆ. ನಾನು ಹಿಂತಿರುಗಿಸುತ್ತೇನೆ ಎಂದರು. ಆಗ ಆತನಿಗೆ ಆಶ್ಚರ್ಯವಾಯಿತು. ನಮ್ಮ ಮನೆಯಲ್ಲಿ ನಡೆದ ಘಟನೆ ಗುರುನಾಥರಿಗೆ ಹೇಗೆ ತಿಳಿಯಿತು ಎಂದು!


ಇದು ಪವಾಡ ಆಗಿರದೆ ಗುರುಗಳ ಸ್ಮೃತಿಗೆ ಎಲ್ಲವೂ ಗೋಚರವಾಗುತ್ತಿತ್ತು.


ಸಖರಾಯಪಟ್ಟಣದ ಗ್ರಾಮಸ್ಥರೆಲ್ಲರ ಸಹಕಾರದಿಂದ ರಾಮ ಮಂದಿರ ನಿರ್ಮಾಣವಾಗುತ್ತಿತ್ತು. ಊರಿನ ಶಾಲಾ ಬಾಲಕರು, ದೊಡ್ಡವರು ಈ ಪುಣ್ಯ ಕಾರ್ಯದಲ್ಲಿ ಕೈಜೋಡಿಸಿದ್ದರು. ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಊರವರೇ ಪಾಯ ತೋಡುವ ಕೆಲಸದಲ್ಲಿ ನಿರತರಾಗಿದ್ದರು. ಕೆಲಸ ಮಾಡುತ್ತಿದ್ದ ಮಕ್ಕಳಿಗೆಲ್ಲ ಮಸಾಲೆ ದೋಸೆ ತಿನ್ನಬೇಕೆಂದು ಆಸೆಯಾಯಿತು. ಕಟ್ಟಡ ಕಾರ್ಯದ ಜವಾಬ್ದಾರಿ ಹೊತ್ತವರ ಬಳಿ ಬಂದ ಆ ಹುಡುಗರು ನಮಗೆಲ್ಲ ಮಸಾಲೆ ದೋಸೆ ಬೇಕು ಎಂದು  ಕೇಳಿದರು. ಆದರೆ, ಅವರು ಕೊಡಿಸಲಿಲ್ಲ. ಬೇಜಾರಾದರೂ ಆ ಹುಡುಗರು ಕಟ್ಟಡ ನಿರ್ಮಾಣ ಕಾರ್ಯ ಮುಂದುವರಿಸಿದರು.


ಮರುದಿನ ಕೆಲಸ ನಡೆಯುತ್ತಿದ್ದಲ್ಲಿಗೆ ಕೆಲವು ಭಕ್ತರೊಂದಿಗೆ ಬಂದ ಗುರುನಾಥರು ಅಲ್ಲಿದ್ದವರಿಗೆಲ್ಲ ಮಸಾಲೆ ದೋಸೆ ತರಿಸಿಕೊಟ್ಟು ಆ ಮಕ್ಕಳನ್ನೆಲ್ಲ ಸಂತೋಷಪಡಿಸಿದರು.


ಸದ್ಗುರುಗಳು ಒಮ್ಮೊಮ್ಮೆ ಮಗುವಿನಂತೆ ಮುಗ್ಧರಾಗಿಯೂ, ತಾಯಿಯಂತೆ ಕರುಣಾಮಯಿಯಾಗಿ,  ಮತ್ತೊಮ್ಮೆ ಇಹಲೋಕದಲ್ಲಿಲ್ಲ ಎನ್ನುವಂತೆ, ಮಗದೊಮ್ಮೆ ಮಹಾನ್ ಸಂತ- ಜ್ಞಾನಿಗಳಂತೆ ಕಂಗೊಳಿಸುತ್ತಿದ್ದರು. ಭಕ್ತರ ಪಾಲಿನ ಆಪದ್ಬಾಂಧವರಾಗಿದ್ದರು. ಕಷ್ಟಪಡುವ ಭಕ್ತರ ಎದುರಿಗೆ ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿ ಅವರ ಕಷ್ಟಗಳನ್ನು ಪರಿಹರಿಸುತ್ತಿದ್ದರು. ಭಕ್ತರ ಪಾಲಿಗೆ ತಂಗಾಳಿ ಯಂತಿದ್ದರೆ,  ಪರೀಕ್ಷಿಸುವವರ ದೃಷ್ಟಿಯಲ್ಲಿ ಈಗ ತಾನೆ ಗುರುಗಳು ಇಲ್ಲೇ ಇದ್ದರಲ್ಲ ಎಲ್ಲಿ ಹೋದರು ಎಂದುಕೊಳ್ಳುವುದರೊಳಗೆ  ಮಾಯವಾಗುತಿದ್ದರು.


ಒಮ್ಮೆ  ತುಂಬಾ ಜನ ಸೇರಿದ್ದರು. ಕೆಲವು ಭಕ್ತರು ತಮ್ಮ ಕಷ್ಟ ಕಾರ್ಪಣ್ಯ ಹೇಳಿಕೊಳ್ಳಲು ಬಂದಿದ್ದರು. ಸದ್ಗುರುಗಳು  ಬಂದಿಲ್ಲವೇ ಎಂದು ಕೇಳಿದಾಗ ಅಲ್ಲಿದ್ದ ಒಬ್ಬರು ಇಲ್ಲ, ಅವರು ಬೇರೆ ಸ್ಥಳಕ್ಕೆ ಹೋಗಿದ್ದಾರೆ. ಯಾವಾಗ ಬರುತ್ತಾರೋ ಗೊತ್ತಿಲ್ಲ ಎಂದರು. ಆ ಕ್ಷಣದಲ್ಲಿ ಸದ್ಗುರುಗಳು ಅಲ್ಲಿ ಪ್ರತ್ಯಕ್ಷರಾದರು! ಭಕ್ತರ ಕಷ್ಟ ಪರಿಹರಿಸಿ ಅವರ ಸುತ್ತ ಜನ ಸುತ್ತುಗಟ್ಟಿ ಮುತ್ತಿಕೊಂಡಾಗ  ಕಣ್ಮರೆಯಾದರು!


ಹಸುಗಳು, ಕತ್ತೆಗಳು, ಪಕ್ಷಿಗಳು ಹಾಗೂ ನಾಲ್ಕು ನಾಯಿಗಳು ಯಾವಾಗಲೂ ಅವರ ಮನೆಯ ಮುಂದೆ ಇರುತ್ತಿದ್ದವು.


ಅವರ ತೊಡುಗೆ ಎಂದರೆ ಒಂದು ಪಂಚೆ,  ಹೆಗಲ ಮೇಲೆ ಒಂದು ಟವಲ್, ಕಾಲಿಗೆ ಹವಾಯಿ ಚಪ್ಪಲಿ, ಭುಜದ ಮೇಲೆ ತಿಂಡಿಗಳು ತುಂಬಿದ ಚೀಲ, ಕೈಯಲ್ಲಿ ಒಂದು ಹಣ್ಣು. ಇದಿಷ್ಟು ಯಾವಾಗಲೂ ಅವರ ಜೊತೆ ಇರುತ್ತಿತ್ತು.‌


ಕೇವಲ ಸಂಕಲ್ಪದಿಂದಲೇ ಎಲ್ಲವನ್ನು ಪಡೆಯುವ ಶಕ್ತಿ ಇದ್ದರೂ ನಿರಾಕರಿಸಿ 'ಉಂಡು ಉಪವಾಸಿ- ಬಳಸಿ ಬ್ರಹ್ಮಚಾರಿ' ಎಂಬಂತೆ ಇರುತ್ತಿದ್ದರು.


ಅವರದು ಬಹುದೊಡ್ಡ ಕುಟುಂಬ. ಅಷ್ಟು ಸಂಬಂಧಗಳಿದ್ದರೂ ಅವರು ಕರ್ತವ್ಯನಿರತ ಸಂಬಂಧಿ ಮಾತ್ರ ಆಗಿದ್ದರು, ಮೋಹ ಸಂಬಂಧಕ್ಕೆ ಒಳಪಟ್ಟಿರಲಿಲ್ಲ. ಅವರಿಗೆ ಯಾರೆಷ್ಟೇ ಅವಮಾನ ಮಾಡಿದರೂ ತಾಯಿ ಮಕ್ಕಳನ್ನು ಕ್ಷಮಿಸುವಂತೆ ಎಲ್ಲರನ್ನೂ ಕ್ಷಮಿಸಿ ಮುಂದೆ ಸಾಗುತ್ತಿದ್ದರು. ಭಕ್ತರ ಕಷ್ಟಗಳನ್ನು ಪರಿಹರಿಸಿ, ಮಾತಿನಿಂದಲೇ ಜನ್ಮ ಜಾಲಾಡಿ ತಪ್ಪನ್ನು ತಿಳಿಸಿ ತಿದ್ದುತ್ತಿದ್ದರು.


ಒಮ್ಮೆ ಸಾಮಾಜಿಕ  ಕಾರ್ಯಗಳಲ್ಲಿ ಗುರುತಿಸಿಕೊಂಡಿದ್ದ ಒಬ್ಬ ಕಾಲೇಜಿನ ಉಪನ್ಯಾಸಕ ಗುರು ದರ್ಶನಕ್ಕೆ ಬಂದಿದ್ದರು. ಗುರುಗಳೇ ತಾವು ಗೋ ಹತ್ಯೆ ನಿಷೇಧಿಸುವಂತೆ ಜನಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು. ಗುರುಗಳು, ಸ್ವಾಮಿ ನೀವು ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಒಂದು ವೇಳೆ ಗೋ ಹತ್ಯೆ ನಿಷೇಧಿಸಿದರೆ ಕೆಲವರಿಗೆ ಒಂದು ಹೊತ್ತಿನ ಊಟಕ್ಕೂ ತೊಂದರೆಯಾಗುತ್ತದೆ. ಅದರಿಂದಲೇ ಅವರ ಜೀವನ ಕಟ್ಟಿಕೊಂಡಿದ್ದಾರೆ. ಅವರ ಬದುಕು ಹೇಗೆ ಸಾಗಬೇಕು ನೀವೇ ಹೇಳಿ? ಅವರಿಗೆ ಹೀಗೆ ಮಾಡಬೇಡಿ ಎನ್ನುವುದಕ್ಕಿಂತ ಅವರೇನು ಮಾಡಬೇಕು ಎಂಬುದನ್ನು  ತಿಳಿಸಿದರೆ ಒಳ್ಳೆಯದು.‌ ನೀವು ಒಂದು ಕೆಲಸ ಮಾಡಿ, ನಿಮ್ಮ ಬ್ಯಾಂಕಿನಲ್ಲಿ 16 ಸಾವಿರ ರೂ. ಹಣ ಇಟ್ಟಿದ್ದೀರಲ್ಲ ಅದನ್ನು ತಂದು ಬಡವರಿಗೆಲ್ಲ ಹಂಚಿ ಅವರ ಜೀವನಕ್ಕೆ ದಾರಿ ಮಾಡಿಕೊಟ್ಟು ಗೋ ಹತ್ಯೆ ನಿಲ್ಲಿಸಿ. ಇದೇ ನಿಜವಾದ ಸಮಾಜಸೇವೆ ಎಂದರು.


ಗುರುಗಳ ಮಾತು ಕೇಳಿ ಆ ವ್ಯಕ್ತಿ ಮುಂದೆ ಮಾತೇ ಆಡಲಿಲ್ಲ! ಸದ್ಗುರುಗಳು ಸಮಾಜ ಸೇವೆ ಕುರಿತು ಅರ್ಥವತ್ತಾಗಿ ತಿಳಿಹೇಳಿ ಸಮಾಜ ಸುಧಾರಣೆಗೆ ಜಾಗೃತಿ ಮೂಡಿಸುತ್ತಿದ್ದರು.


ಸದ್ಗುರು ಎಲ್ಲಿಗೇ ಹೋಗಲಿ ನರವೇಷದಾರಿ ‘ಹರ’ ಎಂದು ನಂಬಿ ಭಕ್ತರು ನಮಸ್ಕರಿಸಿದರೆ, ನನಗ್ಯಾಕೆ ನಮಸ್ಕಾರ? ನಿಮ್ಮ ತಂದೆ ತಾಯಿಗೆ ನಮಸ್ಕರಿಸಿ. ಅವರೇ ನಿಜ ಗುರುಗಳು. ಹಿರಿಯರನ್ನು ಗೌರವಿಸಿ, ಒಡಹುಟ್ಟಿದವರನ್ನು ಚೆನ್ನಾಗಿ ನೋಡಿಕೊಳ್ಳಿ. ಯಾವಾಗಲೂ ಕರ್ತವ್ಯನಿರತರಾಗಿರಿ, ಯಾರ ಮನಸ್ಸಿಗೂ ನೋವು ಮಾಡಬೇಡಿ. ನಿಮ್ಮ ಮನಸ್ಸಿಗೂ ನೋವು ಮಾಡಬೇಡಿ. ಹೀಗೆ ಮಾಡುವುದೇ ದೇವರ ಪೂಜೆ. ಬೇರೆಯವರ ವಿಚಾರಕ್ಕೆ ತಲೆ ಹಾಕಬೇಡಿ. ಎಲ್ಲಿಯ ಜಾತಿ, ನನಗಂತೂ ಯಾವ ಜಾತಿಯೂ ಇಲ್ಲ. ನಿನ್ನ ನಡುವಳಿಕೆಯೇ ನಿನ್ನ ಜಾತ. ಒಳ್ಳೆಯ ನಡವಳಿಕೆ ಬೆಳೆಸಿಕೊಳ್ಳಿ ಎಂದು ಹೇಳಿ ಚೀಲದೊಳಗಿಂದ ಸಿಹಿ ತಿನಿಸು ಹಣ್ಣು ಬಟ್ಟೆ ಏನಾದರೂ ಕೊಟ್ಟು ಆಶೀರ್ವದಿಸುತ್ತಿದ್ದರು.


ತಮ್ಮ ಸರಳ ನಡೆ- ನುಡಿಯ ಮೂಲಕವೇ ಉಪದೇಶ ಮಾಡಿ ಎಲ್ಲರಲ್ಲೂ ಸಮಾನ ಭಾವನೆ ಬಿತ್ತಿ, ಮಿತ್ರತ್ವ ಭಾವ ಬೆಳೆಸುವ  ಅವರ ಮಾತುಗಳು ಕಲ್ಲುಸಕ್ಕರೆಯಂಥ ಸಿಹಿ ಅನುಭವ ಕೊಡುತ್ತಿತ್ತು.


ನಮಃ ಶಿವಾಯ ಗುರವೇ 
ಸಚ್ಚಿದಾನಂದಮೂರ್ತಯೇ |
ನಿಷ್ಪ್ರಪಂಚಾಯ ಶಾಂತಾಯ 
ನಿರಾಲಂಬಾಯ ತೇಜಸೇ ||
ಚಿದಾನಂದಮಯೀಂ ದಿವ್ಯಾಂ
ಆದಿ ಮಧ್ಯಾಂತವರ್ಜಿತಾಮ್ |
ಆತ್ಮರೂಪಾಂ ಪರಾಂ ಶಾಂತಾಂ
ಭವಾನೀಂ ನೌಮಿ ಸಂತತಮ್ ||

✍️ಆಶಾ ನಾಗಭೂಷಣ