
ಜು.17: ವಿವಿಧೆಡೆ ತಪ್ತ ಮುದ್ರಾಧಾರಣೆ
Tuesday, July 16, 2024
ಜು.17: ವಿವಿಧೆಡೆ ತಪ್ತ ಮುದ್ರಾಧಾರಣೆ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಸುದರ್ಶನ ಹೋಮದ ಶಾಖದಲ್ಲಿ ಶಂಖ ಚಕ್ರದ ಮುದ್ರೆಯನ್ನು ಬಿಸಿ ಮಾಡಿ ಅದರ ಲಾಂಛನವನ್ನು ತೋಳು ಸಹಿತ ವಿವಿಧ ಭಾಗಗಳಲ್ಲಿ ಮುದ್ರಿಸಿಕೊಳ್ಳುವುದೇ ತಪ್ತ ಮುದ್ರಾಧಾರಣೆ.
ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗೆ 8.30ರಿಂದ ಪರ್ಯಾಯ ಪುತ್ತಿಗೆ ಹಿರಿಯ ಮತ್ತು ಕಿರಿಯ ಶ್ರೀಗಳು ಮುದ್ರಾಧಾರಣೆ ನಡೆಸುವರು.
ಕೃಷ್ಣಾಪುರ ಮತ್ತು ಶೀರೂರು ಮಠಾಧೀಶರು ಬೆಳಗ್ಗೆ ಉಡುಪಿಯ ಸ್ವಮಠದಲ್ಲಿ, ಅದಮಾರು ಕಿರಿಯ ಶ್ರೀಗಳು ಪೂರ್ವಾಹ್ನ ಅದಮಾರು ಮೂಲ ಮಠದಲ್ಲಿ ಮತ್ತು ಅಪರಾಹ್ನ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮುದ್ರಾಧಾ ರಣೆ ಮಾಡುವರು.
ಸುಬ್ರಹ್ಮಣ್ಯ ಮಠಾಧೀಶರು ಬೆಳಗ್ಗಿನಿಂದ ಕ್ರಮವಾಗಿ ಉಜಿರೆ ಜನಾರ್ದನ ದೇವಸ್ಥಾನ, ಕೆಮ್ಮಾಯಿ ವಿಷ್ಣುಮೂರ್ತಿ ದೇವಸ್ಥಾನ, ಮಜಲುಮಾರು ಉಮಾಮಹೇಶ್ವರ ದೇವಸ್ಥಾನ, ಸುಬ್ರಹ್ಮಣ್ಯ ಮಠ, ಸುಳ್ಯ ರಾಘವೇಂದ್ರ ಮಠದಲ್ಲಿ, ಚಿತ್ರಾಪುರ ಮಠಾಧೀಶರು ಸುರತ್ಕಲ್ ಸಮೀಪದ ಚಿತ್ರಾಪುರ ಮಠದಲ್ಲಿ, ಅಪರಾಹ್ನ ಎಲ್ಲೂರು ಕೆಮುಂಡೇಲು ಪಾಂಡುರಂಗ ಭಜನಾ ಮಂದಿರದಲ್ಲಿ ಮುದ್ರಾಧಾರಣೆ ಮಾಡುವರು.
ಗೃಹಸ್ಥರು ಮುದ್ರಾಧಾರಣೆ ನಡೆಸುವ ಏಕೈಕ ಸ್ಥಳವಾದ ಉಪ್ಪಿನಂಗಡಿ ಸಮೀಪದ ಎರ್ಕಿ ಮಠದಲ್ಲಿ ಅರ್ಚಕ ನರಹರಿ ಉಪಾಧ್ಯಾಯ ಮುದ್ರಾಧಾರಣೆ ನಡೆಸುವರು.
ಪೇಜಾವರ ಶ್ರೀಗಳು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠ, ಚೆನ್ನೈ ಟಿ. ನಗರ ರಾಘವೇಂದ್ರ ಮಠದಲ್ಲಿ, ಪಲಿಮಾರು ಉಭಯ ಮಠಾಧೀಶರು ಬೆಂಗಳೂರು ಮಲ್ಲೇಶ್ವರದ ಪಲಿಮಾರು ಮಠ, ಮೈಸೂರು ಕೆ.ಆರ್. ನಗರ, ಅದಮಾರು ಹಿರಿಯ ಶ್ರೀಗಳು ಬೆಂಗಳೂರು ಪುತ್ತಿಗೆ ಮಠ, ಬಳ್ಳಾರಿಯಲ್ಲಿ, ಭಂಡಾರಕೇರಿ ಶ್ರೀಗಳು ಹುಬ್ಬಳ್ಳಿ ದೇಶಪಾಂಡೆ ನಗರದ ರಾಘವೇಂದ್ರ ಮಠದಲ್ಲಿ ಸೋದೆ ಶ್ರೀಗಳು ಬೆಂಗಳೂರಿನ ಶ್ರೀಕೃಷ್ಣ ವಾದಿರಾಜ ಮಂದಿರದಲ್ಲಿ, ಕಾಣಿಯೂರು ಶ್ರೀಗಳು ಕೇರಳದ ಎರ್ನಾಕುಳಂ ಹಾಗೂ ತ್ರಿಶೂರ್‌ನಲ್ಲಿ ಮುದ್ರಾಧಾರಣೆ ನಡೆಸುವರು.
ಕಾಶೀ, ಗೋಕರ್ಣ ಶ್ರೀಗಳು
ಕಾಶೀ ಮಠಾಧೀಶರು ಮುಂಬಯಿ ವಾಲುಕೇಶ್ವರದ ಕಾಶೀಮಠದಲ್ಲಿ ಜು. 25ರಂದು ಚಾತುರ್ಮಾಸ್ಯವ್ರತ ಕೈಗೊಳ್ಳುವ ದಿನ, ಗೋಕರ್ಣ ಪರ್ತಗಾಳಿ ಮಠಾಧೀಶರು ಬೆಂಗಳೂರಿನ ದ್ವಾರಕಾನಾಥ ಭವನದಲ್ಲಿ ಜುಲೈ 25ರಂದು ಚಾತುರ್ಮಾಸ್ಯ ವ್ರತ ಆರಂಭಿಸುವ ದಿನ ತಪ್ತ ಮುದ್ರಾ ಧಾರಣೆ ನಡೆಸುವರು.