.jpg)
ಶಂಕರಪುರ: ಕೃಷ್ಣವೇಣಿ ಆಶ್ರಯಧಾಮ, ಆಯುರ್ವೇದ ಆಸ್ಪತ್ರೆ ಲೋಕಾರ್ಪಣೆ
Tuesday, July 16, 2024
ಶಂಕರಪುರ: ಕೃಷ್ಣವೇಣಿ ಆಶ್ರಯಧಾಮ, ಆಯುರ್ವೇದ ಆಸ್ಪತ್ರೆ ಲೋಕಾರ್ಪಣೆ
ಲೋಕಬಂಧುನ್ಯೂಸ್ ಡೆಸ್ಕ್, ಶಿರ್ವ
ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ವತಿಯಿಂದ ಇಲ್ಲಿನ ಸಾಲ್ಮರದಲ್ಲಿ ನಿರ್ಮಿಸಿರುವ ನೂತನ ಕೃಷ್ಣವೇಣಿ ಆಶ್ರಯಧಾಮ ಹಾಗೂ ಕೃಷ್ಣವೇಣಿ ಆಯುರ್ವೇದ ಆಸ್ಪತ್ರೆಯನ್ನು ಉಡುಪಿ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಜುಲೈ 15ರಂದು ಉದ್ಘಾಟಿಸಿದರು.
ಆಶ್ರಯಧಾಮ ಎನ್ನುವುದು ವಿದೇಶದ ಕಲ್ಪನೆಯಾದರೂ ಪ್ರಸ್ತುತ ನಮ್ಮ ಸಮಾಜಕ್ಕೆ ಅದರ ಅಗತ್ಯವಿದೆ.
ಸಮಾಜ ಸೇವೆಯಲ್ಲಿ ದೇವರ ಸೇವೆಯ ಕಲ್ಪನೆಯಲ್ಲಿ ಆರಂಭವಾದ ಇವರ ಸೇವೆ ಯಶಸ್ಸು ಪಡೆಯಲಿ ಎಂದು ಶ್ರೀಪಾದರು ಆಶಿರ್ವದಿಸಿದರು.
ಅಭ್ಯಾಗತರಾಗಿದ್ದ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಏಕಾಂಗಿ ಜೀವನದಲ್ಲೂ ಸಾಧನೆ ಮಾಡುತ್ತೇವೆ ಎನ್ನುವವರಿಗೆ ಈ ಆಶ್ರಯಧಾಮ ನೆಲೆಯಾಗುತ್ತದೆ.
ಸಮಾಜದಲ್ಲಿ ಬರುವ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ ಎದುರಿಸುವ ಶಕ್ತಿ, ಆತ್ಮಸ್ಥೆರ್ಯ ಬೇಕು. ಪ್ರಾಯ ಮಿತಿ ಮೀರಿದ್ದರೂ ಬದುಕಿನ ಜೀವನೋತ್ಸಾಹಕ್ಕೆ ಈ ಆಶ್ರಯ ಧಾಮ ಶಕ್ತಿ ನೀಡುತ್ತದೆ.
ಮುಂದಿನ ದಿನಗಳಲ್ಲಿ ಕೃಷ್ಣ ವೇಣಿ ಆಯುರ್ವೇದ ಆಸ್ಪತ್ರೆ ಕಾಲೇಜಾಗಿ ಆಯುರ್ವೇದ ವೈದ್ಯರಾಗಬೇಕು ಎನ್ನುವವರ ಕನಸು ನನಸಾಗಿಸುವ ಶಕ್ತಿಯಾಗಲಿ ಎಂದು ಶುಭ ಹಾರೈಸಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ, ನಿಟ್ಟೆ ಎನ್‌ಎಂಎಎಂಐಟಿ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್, ಕೃಷ್ಣವೇಣಿ ಆಯುರ್ವೇದ ಆಸ್ಪತ್ರೆ ಸಿಇಒ ಡಾ.ಐ.ರಮೇಶ್ ಮಿತ್ಯಂತಾಯ, ಕುರ್ಕಾಲು ಗ್ರಾ.ಪಂ. ಅಧ್ಯಕ್ಷ ಪ್ರಶಾಂತ ಪೂಜಾರಿ, ಇನ್ನಂಜೆ ಗ್ರಾ.ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ, ಕಟಪಾಡಿ ಗ್ರಾ.ಪಂ. ಅಧ್ಯಕ್ಷೆ ಪ್ರಭಾ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಲಕ್ಷ್ಮೀಶ ಉಪಾಧ್ಯಾಯ, ಅಮರನಾಥ ಭಟ್, ಗುರುರಾಜ್ ಭಟ್ ಮೊದಲಾದವರಿದ್ದರು.