ಲೋಕಬಂಧು ನ್ಯೂಸ್, ಉಡುಪಿ
ಕೇರಳ, ಕರ್ನಾಟಕ ಮತ್ತು ಗೋವಾ ಮೂಲಕ ಮಹಾರಾಷ್ಟ್ರ ತಲುಪುವ ಕೊಂಕಣ ರೈಲ್ವೆ ಮಾರ್ಗವನ್ನು ಅಭಿವೃದ್ಧಿಪಡಿಸಿ ಪೂರ್ಣ ಮಾರ್ಗವನ್ನು ದ್ವಿಪಥಗೊಳಿಸುವಂತೆ ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕೊಂಕಣ ರೈಲ್ವೆ ನಿಗಮವನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸಲು ಕೇರಳ ಮತ್ತು ಗೋವಾ ಸರಕಾರಗಳು ಈಗಾಗಲೇ ಒಪ್ಪಿಗೆ ನೀಡಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರ ಸರಕಾರಗಳು ಕೂಡಾ ಸಮ್ಮತಿಸಿದ ಬಗ್ಗೆ ಮಾಹಿತಿ ಇದೆ. ಆದರೂ ವಿಲೀನ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಕೊಂಕಣ ರೈಲ್ವೆ ಮಾರ್ಗ ಮತ್ತು ನಿಲ್ದಾಣ ಅಭಿವೃದ್ಧಿಗೆ ತೊಡಕಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಕೊಂಕಣ ರೈಲ್ವೆ, ಏಕಪಥ ಹಳಿ ಹೊಂದಿರುವುದರಿಂದ ಹೊಸ ರೈಲುಗಳನ್ನು ಓಡಿಸಲಾಗದ ಪರಿಸ್ಥಿತಿ ಇದೆ. ರೈಲ್ವೆ ಹಳಿಗಳ ದ್ವಿಪಥ ಮತ್ತು ಆಧುನೀಕರಣಗೊಳಿಸಲು ಸಹಜವಾಗಿಯೇ ಕೊಂಕಣ ರೈಲ್ವೆ ಅನುದಾನದ ಕೊರತೆ ಅನುಭವಿಸುತ್ತಿದೆ.
ಒಂದುವೇಳೆ ನಿಯಮಗಳು ಮತ್ತು ಸಮನ್ವತೆಯ ಗೊಂದಲದಿಂದ ಕೊಂಕಣ ರೈಲ್ವೆ, ಭಾರತೀಯ ರೈಲ್ವೆಯಲ್ಲಿ ವಿಲೀನ ವಿಳಂಬವಾದರೆ ಪ್ರಯಾಣಿಕರ ಹಿತದೃಷ್ಟಿಯಿಂದ ಮಂಗಳೂರು- ಮುಂಬೈ ವರೆಗೆ ಹಳಿಗಳ ದ್ವಿಪಥ ಕಾಮಗಾರಿ ಕೈಗತ್ತಿಕೊಳ್ಳಬೇಕು ಎಂದು ಸಂಸದ ಕೋಟ ಸದನದಲ್ಲಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
