ಲೋಕಬಂಧು ನ್ಯೂಸ್, ಉಡುಪಿ
ರೈತರ ಬೆಳೆ ವಿಮೆ ಪರಿಹಾರ ಹಣ ಶೀಘ್ರ ಬಿಡುಗಡೆಗೆ ಶಾಸಕ ಯಶಪಾಲ್ ಸುವರ್ಣ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಆಗ್ರಹಿಸಿದ್ದಾರೆ.ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಮೇ ತಿಂಗಳಿನಲ್ಲಿ ವಾಡಿಕೆಯ ಸರಾಸರಿ 166 ಮಿ.ಮೀ.ಗೆ ಬದಲಾಗಿ 837 ಮಿ.ಮೀ.ನಷ್ಟು ಮಳೆಯಾಗಿದ್ದು, ಶೇ. 409ರಷ್ಟು ಹೆಚ್ಚುವರಿ ಮಳೆಯಾಗಿದೆ. ಜೂನ್ ತಿಂಗಳಲ್ಲೂ ಅಧಿಕ ಮಳೆಯಾಗಿದ್ದು, ದೇಶದಲ್ಲಿ ಅತ್ಯಧಿಕವಾಗಿ ಉಡುಪಿ ಜಿಲ್ಲೆಯಲ್ಲಿ ದಾಖಲೆಯ ಮಳೆ ಆಗಿರುವ ಬಗ್ಗೆ ವರದಿಯಾಗಿದೆ.
ಪ್ರಸಕ್ತ ಸಾಲಿನಲ್ಲಿ ಮೇ 15ರಂದು ಪ್ರಾರಂಭಗೊಂಡ ಮಳೆ, ನವೆಂಬರ್ ಅಂತ್ಯದ ವರೆಗೂ ನಿರಂತರವಾಗಿ ಸುರಿದಿದ್ದು, ದೀರ್ಘಾವಧಿಯ ಮಳೆಗಾಲ ಎಂದೆನಿಸಿಕೊಂಡಿದೆ.
ಅನೇಕ ರೈತರು ಇತ್ತೀಚಿನ ಅಕಾಲಿಕ ಮಳೆ, ಗಾಳಿ ಮತ್ತು ಪ್ರಾಕೃತಿಕ ವಿಕೋಪಗಳಿಂದ ಬೆಳೆ ನಷ್ಟ ಅನುಭವಿಸಿದ್ದು, ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಬೆಳೆ ವಿಮೆ ಪರಿಹಾರ ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ ಶೀಘ್ರ ಪರಿಹಾರ ಬಿಡುಗಡೆಗೊಳಿಸುವಂತೆ ಶಾಸಕ ಮನವಿ ಮಾಡಿದ್ದಾರೆ.
ಸಂಕಷ್ಟಕ್ಕೊಳಗಾದ ರೈತರಿಗೆ ತಕ್ಷಣ ಪರಿಹಾರ ದೊರೆತರೆ ಕೃಷಿ ಚಟುವಟಿಕೆಗಳನ್ನು ಮುಂದುವರಿಸಿಕೊಂಡು ಹೋಗಲು ಸಹಾಯವಾಗುತ್ತದೆ ಎಂದು ಶಾಸಕ ಯಶಪಾಲ್ ಸುವರ್ಣ ಮನವಿ ಮಾಡಿದ್ದಾರೆ.