ಲೋಕಬಂಧು ನ್ಯೂಸ್, ಬೆಂಗಳೂರು
ಋತುಚಕ್ರದ ಸಮಯದಲ್ಲಿ ಮಹಿಳಾ ನೌಕರರಿಗೆ ತಿಂಗಳಲ್ಲಿ ಒಂದು ದಿನ ವೇತನ ಸಹಿತ ರಜೆ ಸೌಲಭ್ಯ ಒದಗಿಸುವಂತೆ ಸರಕಾರದ ಅಧಿಸೂಚನೆಗೆ ನೀಡಿದ್ದ ತನ್ನದೇ ತಡೆಯಾಜ್ಞೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಕೆಲವೇ ಗಂಟೆಗಳಲ್ಲಿ ಮಾರ್ಪಡಿಸಿದ ಪ್ರಸಂಗ ಮಂಗಳವಾರ ನಡೆಯಿತು.
ಸರಕಾರದ ಅಧಿಸೂಚನೆ ಪ್ರಶ್ನಿಸಿ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ ಸಲ್ಲಿಸಿರುವ ಅರ್ಜಿ ಕುರಿತು ನ್ಯಾ.ಜ್ಯೋತಿ ಮೂಲಿಮನಿ ಅವರಿದ್ದ ಏಕಸದಸ್ಯ ಪೀಠ ಬೆಳಗಿನ ಕಲಾಪದಲ್ಲಿ ವಿಚಾರಣೆ ನಡೆಸಿತು. ಅಧಿಸೂಚನೆಗೆ ಮಧ್ಯಂತರ ತಡೆ ನೀಡಿತಲ್ಲದೆ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸುವ ಸ್ವತಂತ್ರವನ್ನು ಸರಕಾರ ಹೊಂದಿದೆ ಎಂದು ಆದೇಶಿಸಿತು.
ಈ ವೇಳೆ 'ಪ್ರತಿವಾದಿಗಳ ಆಕ್ಷೇಪಣೆ ಆಲಿಸದೇ ಅರ್ಜಿದಾರರ ಮಧ್ಯಂತರ ಆದೇಶ ಮಾನ್ಯ ಮಾಡಲಾಗಿದೆ' ಎಂದು ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು. ಋತುಚಕ್ರ ರಜೆಗೆ ನೀತಿ ರೂಪಿಸುವಂತೆ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್ ಹೊರಡಿಸಿದ ಆದೇಶಕ್ಕೆ ಅನುಗುಣವಾಗಿಯೇ ರಾಜ್ಯ ಸರ್ಕಾರ ಸಾಂವಿಧಾನಿಕ ಪ್ರದತ್ತವಾದ 142ನೇ ವಿಧಿಯಡಿ ತನ್ನ ಅಧಿಕಾರ ಬಳಸಿ ಈ ಕ್ರಮ ಕೈಗೊಂಡಿದೆ ಎಂದರು.
ಅದನ್ನು ಪರಿಗಣಿಸಿದ ನ್ಯಾಯಪೀಠ ಸರಕಾರದ ಅಧಿಸೂಚನೆಗೆ ಹೊರಡಿಸಿದ್ದ ತನ್ನದೇ ತಡೆಯಾಜ್ಞೆ ತೆರವುಗೊಳಿಸಿ ಆದೇಶ ಹೊರಡಿಸಿತು.
