ಲೋಕಬಂಧು ನ್ಯೂಸ್, ಉಡುಪಿ
ಇಲ್ಲಿನ ನಿಟ್ಟೂರಿನಲ್ಲಿರುವ ರಾಜ್ಯ ಮಹಿಳಾ ನಿಲಯ ಶುಕ್ರವಾರ ಅಕ್ಷರಶಃ ಮದುವೆ ಮಂಟಪವಾಗಿತ್ತು! ಸ್ವಾಗತ ದ್ವಾರ, ಮದುವೆ ಚಪ್ಪರ, ತಳಿರು-ತೋರಣ, ಬಣ್ಣ ಬಣ್ಣದ ರಂಗೋಲಿ ಚಿತ್ತಾರಗಳಿಂದ ಅಲಂಕರಿಸಲಾಗಿತ್ತು. ಇಲ್ಲಿನ ಈರ್ವರು ನಿವಾಸಿನಿಯರು ಗೃಹಸ್ಥಾಶ್ರಮ ಸ್ವೀಕರಿಸುವ ಅದ್ದೂರಿ ಸಮಾರಂಭ ಇದಾಗಿದ್ದು, ಯಾವುದೇ ಖಾಸಗಿ ಮದುವೆಗೆ ಕಡಿಮೆ ಇಲ್ಲದಂತೆ ರಾಜ್ಯ ಮಹಿಳಾ ನಿಲಯ ಸಿಂಗಾರಗೊಂಡಿತ್ತು.ಮದುವೆಗೆ ಆಮಂತ್ರಿತ ಗಣ್ಯರು, ಅಧಿಕಾರಿಗಳನ್ನು ತಂಪು ಪಾನೀಯ ಹಾಗೂ ಗುಲಾಬಿ ಹೂವು ನೀಡಿ, ನಿಲಯದ ಸಿಬ್ಬಂದಿಗಳು ಆದರದಿಂದ ಬರಮಾಡಿಕೊಳ್ಳುತ್ತಿರುವ ದೃಶ್ಯ ಮದುವೆ ಮನೆಯನ್ನು ನೆನಪಿಗೆ ತರುವಂತಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ನಿಲಯ ಉಡುಪಿ ಸಹಯೋಗದಲ್ಲಿ ಸಂಸ್ಥೆಯ ನಿವಾಸಿನಿಯರಾದ ಮಲ್ಲೇಶ್ವರಿ ವಿವಾಹ ಮೂಲ್ಕಿ ಬಪ್ಪನಾಡು ನಿವಾಸಿ ಸತೀಶ್ ಪ್ರಭು ಪುತ್ರ ಸಂಜಯ ಪ್ರಭು ಅವರೊಂದಿಗೆ ಹಾಗೂ ಇನ್ನೊರ್ವ ನಿವಾಸಿನಿ ಸುಶೀಲ ಮದುವೆ ವಿವಾಹ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಕೃಷ್ಣಾಪುರ ಗ್ರಾಮದ ಮಲ್ಲಪ್ಪ ಪುತ್ರ ನಾಗರಾಜ ಅವರೊಂದಿಗೆ ಶಾಸ್ತ್ರೋಕ್ತವಾಗಿ, ಮಂಗಳವಾದ್ಯಗಳೊಂದಿಗೆ ಸುಮೂಹೂರ್ತದಲ್ಲಿ ಸಂಪನ್ನಗೊಂಡಿತು. ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಧಾರೆ ಎರೆದು, ಹಿಂದೂ ಸಂಪ್ರದಾಯದಂತೆ ಮಂಗಳ ಕಾರ್ಯ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಮಹಿಳಾ ನಿಲಯದ ಹೆಣ್ಣು ಮಕ್ಕಳ ಜೀವನ ರೂಪಿಸಲು ಸರಕಾರದ ವತಿಯಿಂದ ಅವರಿಗೆ ವಿದ್ಯಾಭ್ಯಾಸ, ಉದ್ಯೋಗಾವಕಾಶ, ಕೌಶಲ್ಯ ತರಬೇತಿ ನೀಡಲಾಗುತ್ತಿದೆ. ಜೊತೆಗೆ ಅವರ ಇಚ್ಛೆಗೆ ಅನುಸಾರವಾಗಿ ವರ ಬಂದಲ್ಲಿ ಆತನ ಪೂರ್ವಾಪರಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಮದುವೆ ಮಾಡಿಕೊಡಲಾಗುವುದು.
ಮದುವೆಯ ನಂತರ ವಿವಾಹ ನೋಂದಣಿ ಮಾಡಲಾಗುವುದು. ನಿಲಯದ ನಿವಾಸಿನಿಯರಿಗೆ 50 ಸಾವಿರ ರೂ. ಪ್ರೋತ್ಸಾಹ ಧನವನ್ನು ಅವರ ಹೆಸರಿನಲ್ಲಿ ಠೇವಣಿ ಇಟ್ಟು, ನಿರಂತರ ಮೂರು ವರ್ಷ ಕಾಲ ಇಲಾಖೆ ವಧು-ವರರ ಜೀವನದ ಮೇಲೆ ನಿಗಾ ವಹಿಸಲಿದೆ. ಆ ನಂತರದಲ್ಲಿ ಸಂಸ್ಥೆಯ ನಿವಾಸಿನಿಯರ ಖಾತೆಗೆ ಹಣ ವರ್ಗಾಯಿಸಲಾಗುವುದು ಎಂದರು.
ನಿಲಯದ ಅಧೀಕ್ಷಕಿ ಪುಷ್ಪಾರಾಣಿ, ಈಗಾಗಲೇ ಈ ನಿಲಯದಲ್ಲಿ 25 ಯಶಸ್ವಿ ಮದುವೆ ನಡೆದಿದ್ದು, ಇದೀಗ 27ನೇ ಮದುವೆಯನ್ನು ಸಂಭ್ರಮದಿಂದ ನಡೆಸಲಾಗಿದೆ. ನಿಲಯದಲ್ಲಿ ಮದುವೆಗಳು ಹೆಚ್ಚಾದಂತೆ ವಧುವನ್ನು ಅರಸಿ ಕರೆ ಮಾಡುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ ಎಂದರು.
ವಿವಾಹ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಉಪ ಪೊಲೀಸ್ ಅಧೀಕ್ಷಕ ಪ್ರಭು ಡಿ.ಟಿ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಶ್ಯಾಮಲಾ ಸಿ.ಕೆ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ, ರಾಜ್ಯ ಮಹಿಳಾ ನಿಲಯದ ಸಿಬ್ಬಂದಿ, ನಿವಾಸಿನಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿ ಮೊದಲಾದವರಿದ್ದರು.
ಮದುವೆಗಾಗಿ ಸಿಹಿ ಖಾದ್ಯಗಳೊಂದಿಗೆ ಭರ್ಜರಿ ಭೋಜನವನ್ನೂ ಏರ್ಪಡಿಸಲಾಗಿತ್ತು. ನವ ದಂಪತಿಗಳಿಗೆ ಹರಸಿ, ಆಶೀರ್ವದಿಸಿದ ಅತಿಥಿಗಳು, ಭೋಜನ ಸವಿದು ನವ ದಂಪತಿಗಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕೈಹಿಡಿದ ಐಬಿಎಂ ಉದ್ಯೋಗಿ
ರಾಜ್ಯ ಮಹಿಳಾ ನಿಲಯದ ನಿವಾಸಿನಿ ಮಲ್ಲೇಶ್ವರಿ ಮೂರನೇ ವರ್ಷದ ಪದವಿ ಶಿಕ್ಷಣ ಪಡೆಯುತ್ತಿದ್ದು, ಆಕೆಯ ಕೈಹಿಡಿದ ದ.ಕ. ಜಿಲ್ಲೆಯ ಮೂಲ್ಕಿ ಬಪ್ಪನಾಡಿನ ಸಂಜಯ ಪ್ರಭು ಎಂ.ಕಾಂ ಪದವಿಧರ. ಐಬಿಎಂ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ನ್ಯೂನತೆ ಮರೆತು ಕೈಹಿಡಿದ ಯುವಕ
ಸಂಸ್ಥೆಯ ಇನ್ನೋರ್ವ ನಿವಾಸಿನಿ ಸುಶೀಲ ಮೂಕಿ ಮತ್ತು ಕಿವುಡಿ. ತನ್ನ ನ್ಯೂನತೆಯನ್ನು ಮೆಟ್ಟಿನಿಂತು ಇತರರಂತೆ ನಿಲಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿರುವ ವಧುವನ್ನು ಆಕೆಯ ನ್ಯೂನತೆ ಮರೆತು ಹಾಸನ ಹೊಳೆನರಸೀಪುರದಲ್ಲಿ ಸ್ವಂತ ಉದ್ಯೋಗ ನಡೆಸುತ್ತಿರುವ ನಾಗರಾಜ ಪಾಣಿಗ್ರಹಣ ಮಾಡಿಕೊಂಡರು.