ಗೃಹ ರಕ್ಷಕರ ಸಾಧನೆ ಇತರರಿಗೆ ಮಾದರಿಯಾಗಲಿ

ಲೋಕಬಂಧು ನ್ಯೂಸ್, ಉಡುಪಿ
ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗೃಹ ರಕ್ಷಕರು ಸಮಾಜಕ್ಕೆ ಅತ್ಯುತ್ತಮ ಸೇವೆ ನೀಡುತ್ತಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲಿಯೂ ಗೃಹ ರಕ್ಷಕರು ಪೊಲೀಸರಷ್ಟೇ ಸಮರ್ಥರಾಗಿ ಹಗಲು- ರಾತ್ರಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಜೊತೆಗೆ ವೈಯಕ್ತಿಕವಾಗಿಯೂ ಸಾಧನೆ ಮಾಡುತ್ತಿದ್ದಾರೆ. ಅವರ ಸಾಧನೆ ಇತರರಿಗೂ ಮಾದರಿಯಾಗಲಿ ಎಂದು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ಎಸ್. ನಾಯ್ಕ್ ಹೇಳಿದರು.
ಜಿಲ್ಲಾ ಗೃಹ ರಕ್ಷಕ ದಳ ಕಚೇರಿಯಲ್ಲಿ ನಡೆದ ಅಖಿಲ ಭಾರತ ಗೃಹ ರಕ್ಷಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.


ಗೃಹ ರಕ್ಷಕರು ಪೊಲೀಸ್, ಎನ್.ಸಿ.ಸಿ, ಪ್ರವಾಸೋದ್ಯಮ, ಸಾರಿಗೆ, ಪುರಾತತ್ವ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ತಮ್ಮ ಸೇವೆ ನೀಡುವ ಜೊತೆಗೆ ಪ್ರಾಕೃತಿಕ ವಿಕೋಪ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸುರಕ್ಷತಾ ವ್ಯವಸ್ಥೆಯನ್ನೂ ನಿರ್ವಹಿಸುತ್ತಾರೆ. ತಮ್ಮ ಕಾರ್ಯ ಕ್ಷೇತ್ರಗಳಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವ ಜೊತೆ ವಿವಿಧ ಕೇತ್ರಗಳಲ್ಲಿ ಸಾಧನೆ ಮಾಡಿ ಜಿಲ್ಲೆಗೂ ಕೀರ್ತಿ ತರುತ್ತಿದ್ದು, ಅವರಿಂದ ಇತರರೂ ಪ್ರೇರಣೆ ಪಡೆದು ಸಾಧನೆ ಮಾಡಬೇಕು. ಗೃಹ ರಕ್ಷಕರ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಅವರು ಇನ್ನೂ ಹೆಚ್ಚಿನ ಸಾಧನೆ ಮಾಡಿ ರಾಜ್ಯಕ್ಕೆ ಹೆಸರು ತರುವಂತಾಗಬೇಕು ಎಂದವರು ಆಶಿಸಿದರು.


ಅಭ್ಯಾಗತರಾಗಿದ್ದ ಆದರ್ಶ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಜಿ.ಎಸ್. ಚಂದ್ರಶೇಖರ್, ಸ್ವಯಂಸೇವಕರಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ನೀಡುತ್ತಿರುವ ಗೃಹ ರಕ್ಷಕರ ಕಾರ್ಯವೈಖರಿ ಶ್ಲಾಘನೀಯ. ಬಹುತೇಕ ಗ್ರಾಮೀಣ ಭಾಗಗಳಿಂದ ಬರುವ ಗೃಹ ರಕ್ಷಕರು ಸುರಕ್ಷಿತ ಸಮಾಜ ಕಟ್ಟುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಇಂದಿನ ಕಾಲಘಟ್ಟದಲ್ಲಿ ಸಮಾಜದಲ್ಲಿ ನಡೆಯುವ ಕುಕೃತ್ಯಗಳನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸುವ ಗೃಹ ರಕ್ಷಕರು, ಸಮಾಜದಲ್ಲಿರುವ ಲೋಪದೋಷಗಳನ್ನು ತಿದ್ದುವ ನಿಟ್ಟಿನಲ್ಲಿಯೂ ಕಾರ್ಯೋನ್ಮುಖರಾಗಬೇಕು ಎಂದರು.


ಇಂದಿನ ಯುವ ಜನತೆ ತಂಬಾಕು, ಮಾದಕ ದ್ರವ್ಯ ಸೇವನೆಯಂಥ ದುಶ್ಚಟಗಳ ದಾಸರಾಗುತ್ತಿದ್ದು, ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ.


ವಯಸ್ಕರು ರಕ್ತದೊತ್ತಡ, ಸಕ್ಕರೆ ಕಾಯಿಲೆ ಮತ್ತು ಕ್ಯಾನ್ಸರ್ ನಂಥ ಜೀವನ ಶೈಲಿಯಿಂದ ಉಂಟಾಗುವ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಗೃಹ ರಕ್ಷಕರು ತಾವು ಸೇವೆ ನೀಡುತ್ತಿರುವ ಹಳ್ಳಿಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕಾರ್ಯ ಕೈಗೊಂಡು ಗ್ರಾಮೀಣ ಭಾಗದಲ್ಲಿ ಆರೋಗ್ಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದಲ್ಲಿ ಆರೋಗ್ಯವಂತ ಹಾಗೂ ಅಪರಾಧ ಮುಕ್ತ ಸಮಾಜ ನಿರ್ಮಿಸಬಹುದು.


ನಿತ್ಯ ಜೀವನದಲ್ಲಿ ಸರಿಯಾದ ಆಹಾರ ಪದ್ಧತಿ, ಮಾನಸಿಕ ಆರೋಗ್ಯ ಮತ್ತು ದೈಹಿಕ ವ್ಯಾಯಾಮದ ಆವಶ್ಯಕತೆ ಬಗ್ಗೆ ಜನರಿಗೆ ಶಿಕ್ಷಣ ನೀಡಿ ಸದೃಢ ಸಮಾಜ ರೂಪಿಸಬೇಕು ಎಂದರು.


ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗೃಹ ರಕ್ಷಕರಾದ ಶಶಿಕಿರಣ್, ಅನಿಲ್ ಥೋಮಸ್, ಜಯಂತಿ, ಸಂಧ್ಯಾ, ಲತಾ ಮತ್ತು ದಿನೇಶ್ ಅವರನ್ನು ಸನ್ಮಾನಿಸಲಾಯಿತು.


ಉಡುಪಿ ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟ ಡಾ.ರೋಶನ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರತಿಜ್ಞಾ ವಿಧಿ ಬೋಧಿಸಿ ವಾರ್ಷಿಕ ವರದಿ ವಾಚಿಸಿದರು. ಜಿಲ್ಲಾ ಗೃಹ ರಕ್ಷಕ ದಳದ ಅಧೀಕ್ಷಕ ರತ್ನಾಕರ್ ಸನ್ಮಾನಿತರ ವಿವರ ನೀಡಿದರು. ಬ್ರಹ್ಮಾವರ ಘಟಕ ಪ್ಲಟೂನ್ ಕಮಾಂಡರ್ ಸ್ಟೀವನ್ ಪ್ರಕಾಶ್ ಲೂವಿಸ್ ನಿರೂಪಿಸಿ, ಪ್ರಭಾಕರ ಸುವರ್ಣ ವಂದಿಸಿದರು.