ಲೋಕಬಂಧು ನ್ಯೂಸ್, ನವದೆಹಲಿ
ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ ಸಂಸತ್ ಅಧಿವೇಶನ ಇದ್ದಾಗಲೆಲ್ಲ ಹೆಚ್ಚು ಕಾಲ ವಿದೇಶದಲ್ಲೇ ಇರುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಪ್ರಧಾನಿ ಮೋದಿ ವಿದೇಶ ಪ್ರವಾಸ ಬಗ್ಗೆ ತಗಾದೆ ತೆಗೆಯುತ್ತಿರುವ ಕಾಂಗ್ರೆಸ್ ನಾಯಕರ ಆರೋಪಕ್ಕೆ ಖಡಕ್ ಪ್ರತಿಕ್ರಿಯೆ ನೀಡಿದ ಜೋಶಿ, ರಾಹುಲ್ ಗಾಂಧಿ ಸಂಸತ್ ಅಧಿವೇಶನ ನಡೆಯುತ್ತಿರುವಾಗಲೇ ಏಕೆ ಹೆಚ್ಚು ಸಮಯ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ಸಂಸತ್ ಅಧಿವೇಶನ ನಡೆಯುತ್ತಿರುವಾಗ ಹೆಚ್ಚಾಗಿ ವಿದೇಶದಲ್ಲಿಯೇ ಇರುವ ರಾಹುಲ್, ಬಳಿಕ ಸಂಸತ್ತಿನಲ್ಲಿ ತಮಗೆ ಮಾತನಾಡಲು ಅವಕಾಶವೇ ಸಿಗಲಿಲ್ಲ ಎಂಬ ವೃಥಾ ಆರೋಪ ಮಾಡುತ್ತಾರೆ.
ವಾಸ್ತವದಲ್ಲಿ ರಾಹುಲ್ ಗಾಂಧಿ ಸಂಸತ್ ಅಧಿವೇಶನಕ್ಕೆ ಆಗಾಗ ಗೈರಾಗುತ್ತಲೇ ಇರುತ್ತಾರೆ. ಅವರೊಬ್ಬ 'ಅರೆಕಾಲಿಕ ಮತ್ತು ಬೇಜವಾಬ್ದಾರಿ ರಾಜಕೀಯ ನಾಯಕ. ವಿಪಕ್ಷ ನಾಯಕನ ಸ್ಥಾನದಲ್ಲಿದ್ದು ಸ್ವಲ್ಪವೂ ಗಂಭೀರತೆಯೇ ಇಲ್ಲದ ರಾಜಕಾರಣಿ ಎಂದು ಜೋಶಿ ಟೀಕಿಸಿದರು.
ಕಾಂಗ್ರೆಸ್ ಸೋತಾಗ ಇವಿಎಂ ಮತ್ತು ಚುನಾವಣಾ ಆಯೋಗವನ್ನು ದೂಷಿಸುತ್ತದೆ. ಗೆಲುವಾದಾಗ ಬೇರೆಯದ್ದೇ ಪ್ರತಿಕ್ರಿಯೆ ನೀಡುತ್ತದೆ. ಹೀಗೆ ಸೋತಾಗ ಒಂದು, ಗೆದ್ದಾಗ ಒಂದು ಭಿನ್ನ ವಿಭಿನ್ನ ಹೇಳಿಕೆ ನೀಡುವುದು ಸರಿಯಲ್ಲ ಎಂದು ಸಚಿವ ಪ್ರಹ್ಲಾದ ಜೋಶಿ ಹೇಳಿದರು.
