ಲೋಕಬಂಧು ನ್ಯೂಸ್, ಬೆಳಗಾವಿ
ಐದು ವರ್ಷಗಳ ಬಳಿಕ ಪೊಲೀಸ್ ಉಪನಿರೀಕ್ಷಕರ ನೇಮಕಾತಿ ಪ್ರಕ್ರಿಯೆಗೆ ಸ್ಪಷ್ಟತೆ ದೊರೆತಿದ್ದು, 545 ಪಿಎಸ್‌ಐಗಳ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಆಯ್ಕೆಯಾದ ಅಭ್ಯರ್ಥಿಗಳ ತರಬೇತಿ ಅಂತಿಮ ಹಂತದಲ್ಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಮುಂದಿನ ಮೂರು ತಿಂಗಳಲ್ಲಿ ತರಬೇತಿ ಮುಗಿದು ರಾಜ್ಯದಾದ್ಯಂತ ಖಾಲಿ ಇರುವ ಸ್ಥಳಗಳಿಗೆ ಪಿಎಸ್‌ಐಗಳನ್ನು ನಿಯೋಜನೆ ಮಾಡುವುದಾಗಿ ಅವರು ಭರವಸೆ ನೀಡಿದರು.
ಚಳಿಗಾಲದ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಮಂಗಳವಾರ ಮೂಲ್ಕಿ- ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ನಡೆದ ಪಿಎಸ್‌ಐ ನೇಮಕಾತಿ ಅವ್ಯವಹಾರ ಪ್ರಕರಣ ಬಗೆಹರಿದಿದ್ದು, ಅಭ್ಯರ್ಥಿಗಳನ್ನು ತರಬೇತಿಗೆ ಕಳಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪ್ರಕ್ರಿಯೆಗೆ ಹಣಕಾಸು ಇಲಾಖೆಯ ಅನುಮೋದನೆ ಕಾಯಲಾಗುತ್ತಿದೆ. ಅನುಮೋದನೆ ಲಭಿಸಿದ ತಕ್ಷಣ ಕಾನ್ಸ್‌ಟೇಬಲ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
ಕರಾವಳಿ ಸುರಕ್ಷತೆಗೆ ವಿಶೇಷ ಪಡೆ
ಕರಾವಳಿ ಪ್ರದೇಶದಲ್ಲಿ ಅಪರಾಧ ಚಟುವಟಿಕೆಗಳ ಏರಿಕೆ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಪಡೆ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವ ಪರಮೇಶ್ವರ್ ತಿಳಿಸಿದರು.
ಮನೆ– ಮನೆಗೆ ಪೊಲೀಸ್ ಕಾರ್ಯಕ್ರಮವನ್ನು ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೊಳಿಸಿದ್ದು 50 ಮನೆಗಳಿಗೆ 1 ಕ್ಲಸ್ಟರ್ ಮಾದರಿಯಲ್ಲಿ ಪೊಲೀಸರ ಸಂವಾದ ಮತ್ತು ಸಮಸ್ಯೆ ಸಂಗ್ರಹ ತಜ್ಞ ವಿಧಾನವನ್ನು ಅನುಸರಿಸಲಾಗುತ್ತಿದೆ.
ಮಹಿಳಾ ಸುರಕ್ಷತೆಗೆ ‘ಅಕ್ಕಪಡೆ'
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ‘ಅಕ್ಕಪಡೆ’ ರಚಿಸಲಾಗಿದ್ದು, ಇದು ಮಹಿಳಾ ಸುರಕ್ಷತಾ ಜಾಲವನ್ನು ಮತ್ತಷ್ಟು ಬಲಪಡಿಸಿದೆ ಎಂದು ಸಚಿವರು ಹೇಳಿದರು. ಈ ಸುರಕ್ಷತಾ ಕ್ರಮಗಳ ಜಾರಿ ನಂತರ ರಾಜ್ಯದಲ್ಲಿ ಅಪರಾಧ ಪ್ರಮಾಣ ಇಳಿಮುಖವಾಗಿದೆ ಎಂದವರು ಮಾಹಿತಿ ನೀಡಿದರು.
ಸುರಕ್ಷಿತ ವಲಯದ ಬದ್ಧತೆ
ಕರಾವಳಿ ಪ್ರದೇಶವನ್ನು ಪೂರ್ಣ ಸುರಕ್ಷಿತ ವಲಯವಾಗಿ ರೂಪಿಸುವುದು ಸರ್ಕಾರದ ಬದ್ಧತೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪುನರುಚ್ಚರಿಸಿದರು. ಆ ಭಾಗದಲ್ಲಿ ಪೊಲೀಸ್ ಬಲ, ಮೇಲ್ವಿಚಾರಣೆ ಮತ್ತು ಗಸ್ತು ಪದ್ಧತಿಯನ್ನು ವಿಸ್ತರಿಸುವ ಕೆಲಸ ಪ್ರಸ್ತುತ ನಡೆಯುತ್ತಿದೆ ಎಂದರು.
