ಕೃಷಿ ಅಧ್ಯಯನ ಕೇಂದ್ರವಾಗಿ ಮಾರ್ಪಾಡಾದ ಗೋಧಾಮ

ಲೋಕಬಂಧು ನ್ಯೂಸ್, ಹೆಬ್ರಿ
ಮುನಿಯಾಲು ಸಂಜೀವಿನಿ ಗೋಧಾಮ ಕೃಷಿ ಅಧ್ಯಯನ ಕೇಂದ್ರವಾಗಿ ಮಾರ್ಪಾಡಾಗಿದೆ. ನಾಗಮಂಡಲದ ಮೂಲಕ ಪ್ರಕೃತಿಯನ್ನು ಕಾಪಾಡುವ ಜೊತೆಗೆ ರೈತರನ್ನು ಗೌರವಿಸುವ ಕೆಲಸ ಆಗಿದೆ. ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಬೇಕಿದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹೇಳಿದರು.ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ‌‌ ಫೆಬ್ರವರಿ 21ರಂದು ಮಂಗಳವಾರ‌ ನಡೆದ ಶ್ರೀಮನ್ನಾಗಮಂಡಲ ಸಂದರ್ಭದಲ್ಲಿ ನಡೆದ ಸಭಾಮಂಡಲದಲ್ಲಿ ಆಶೀರ್ವಚನ ನೀಡಿದರು.ಪ್ರಕೃತಿಯ ರಕ್ಷಣೆ ಮಾಡಿ, ಅದರೊಳಗೆ ಬದುಕು ಕಟ್ಟಿಕೊಂಡು ಸನಾತನ ಮೌಲ್ಯಗಳು ಬೆಳೆಸಿಕೊಂಡ ಗೋಧಾಮದಲ್ಲಿ ಇಂಥ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಜನರಲ್ಲಿ ಒಳ್ಳೆಯ ಮೌಲ್ಯ ಬಿತ್ತರಿಸಿ,  ಜ್ಞಾನಾರ್ಜನೆಯ ಕೆಲಸಗಳಾಗುತ್ತಿದೆ ಎಂದು ಉಡುಪಿ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.


ಡಾ.ಜಿ. ರಾಮಕೃಷ್ಣ ಆಚಾರ್ ಅವರ ಗೋಧಾಮ ಕೃಷಿಯ ಮಾದರಿಯಾಗಿ ರೂಪುಗೊಂಡಿದ್ದು, ನಮ್ಮ ಕೃಷಿ ಹಾಗೂ ಹಳ್ಳಿಯ ಜೀವನ ಪದ್ಧತಿಯನ್ನು ಉಳಿಸಿ ಬೆಳೆಸುವ ಕೆಲಸ ಆಗಿದೆ ಎಂದು ಶ್ರೀಗಳು ಪ್ರಶಂಸಿಸಿದರು.


ಕಾರ್ಕಳ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಗೋಧಾಮದಲ್ಲಿ ಕೃಷಿ ಕ್ರಾಂತಿಯಾಗಿದೆ. ಕಲ್ಲು ಬಂಡೆಗಳಿಂದ ಕೂಡಿದ ಪ್ರದೇಶ ಹಚ್ಚಹಸಿರಾಗಿದೆ. ಕೃಷಿಯಿಂದ ರೈತರು ವಿಮುಖರಾಗುತ್ತಿರುವ ಸಂದರ್ಭದಲ್ಲಿ ಗೋಧಾಮದಲ್ಲಿ ಸಮಗ್ರ ಕೃಷಿಯ ಬೆಳವಣಿಗೆ ನಡೆದಿದೆ. ಯುವಜನರನ್ನು ಕೃಷಿಯತ್ತ ಸೆಳೆದು, ಸಂಸ್ಕೃತಿಯನ್ನು ಉಳಿಸುವ ಕೆಲಸ ನಡೆಯುತ್ತಿದೆ ಎಂದರು.


ಶ್ರೀಮನ್ನಾನಾಗಮಂಡಲ ಸೇವಾ ಸಮಿತಿ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು ಅಧ್ಯಕ್ಷತೆ ವಹಿಸಿದ್ದರು.


ಕಟಪಾಡಿ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಅಧ್ಯಕ್ಷ ವಿ. ಶ್ರೀಧರ ಆಚಾರ್ಯ ವಡೇರಹೋಬಳಿ, ಆಧ್ಯಾತ್ಮಿಕ ಚಿಂತಕಿ ರೂಪಾ ಅಯ್ಯರ್, ಮಂಗಳೂರಿನ ಲೆಕ್ಕಪರಿಶೋಧಕ ಎಸ್. ಎಸ್. ನಾಯಕ್, ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ, ರಾಜರ್ಷಿ ಕಾಪು ವಾಸುದೇವ ಶೆಟ್ಟಿ, ಗೋಧಾಮದ ಪ್ರವರ್ತಕ ಡಾ.ಜಿ.ರಾಮಕೃಷ್ಣ ಆಚಾರ್ ಇದ್ದರು.


ಸಮಿತಿ ಪ್ರಧಾನ‌ ಕಾರ್ಯದರ್ಶಿಗಳಾದ ಶ್ರೀಕಾಂತ್ ಶೆಟ್ಟಿ ಸ್ವಾಗತಿಸಿ, ದಾಮೋದರ ಶರ್ಮ ನಿರೂಪಿಸಿದರು.