ಉಡುಪಿ ನಗರಸಭೆ ಆಸ್ತಿತೆರಿಗೆ ವಂಚನೆ: ಈರ್ವರ ಬಂಧನ

ಲೋಕಬಂಧು ನ್ಯೂಸ್, ಉಡುಪಿ
ಇಲ್ಲಿನ ನಗರಸಭೆಯ ಆಸ್ತಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಸರಕಾರಕ್ಕೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದು, ಬಂಧಿತರನ್ನು ನಗರಸಭೆ ಹೊರಗಡೆ ತೆರಿಗೆ ಸಲಹೆಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬನ್ನಂಜೆ ನಿವಾಸಿ ಶಾಲಿನಿ ಹಾಗೂ ಕುಕ್ಕಿಕಟ್ಟೆಯ ಗಣೇಶ್ ಎಂದು ಗುರುತಿಸಲಾಗಿದೆ.ಆನಂದ ಸುವರ್ಣ ಎಂಬವರು ಕಲ್ಮಾಡಿಯಲ್ಲಿರುವ ತನ್ನ ಕಟ್ಟಡಕ್ಕೆ ಸಂಬಂಧಪಟ್ಟಂತೆ 2025ರ ಅ.16ರಂದು 12 ವರ್ಷಗಳ ಆಸ್ತಿ ತೆರಿಗೆ ಮೊತ್ತ ಒಟ್ಟು 34,730 ರೂ. ಹಣವನ್ನು ನಗರಸಭೆ ಕಚೇರಿಯಲ್ಲಿ ಹೊರಗಡೆ ಕೆಲಸ ಮಾಡಿಕೊಂಡಿರುವ ಶಾಲಿನಿ ಎಂಬಾಕೆಗೆ ನೀಡಿದ್ದು, ಅದಕ್ಕೆ ಶಾಲಿನಿ ತೆರಿಗೆ ಪಾವತಿಯಾದ ಬಗ್ಗೆ ಸ್ವೀಕೃತಿಯನ್ನು ನೀಡಿದ್ದಳು.


ಇತ್ತೀಚೆಗೆ ಆನಂದ ಸುವರ್ಣ ಆಸ್ತಿ ತೆರಿಗೆ ಪೋರ್ಟಲ್‌ನಲ್ಲಿ ತೆರಿಗೆ ಪಾವತಿ ಬಗ್ಗೆ ಪರಿಶೀಲಿಸಿದಾಗ ತೆರಿಗೆ ಪಾವತಿ ಆಗದೇ‌ ಬಾಕಿ ಇರುವ ಬಗ್ಗೆ ತಿಳಿದುಬಂತು. ಈ ವಿಚಾರವನ್ನು ಆನಂದ ಸುವರ್ಣ ಪೌರಾಯುಕ್ತರ ಗಮನಕ್ಕೆ ತಂದಿದ್ದು, ಅವರು ಕೂಡಾ ಪರಿಶೀಲಿಸಿದಾಗ ಬಾಕಿ ಇರುವುದು ಕಂಡುಬಂದಿದ್ದು,
ನಂತರ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿರುವ ಶಾಲಿನಿಯನ್ನು ಕರೆದು ವಿಚಾರಿಸಿದಾಗ ಆಕೆ ತಪ್ಪು ಒಪ್ಪಿಕೊಂಡಿದ್ದು, 2026ರ ಫೆ.16ರಂದು ಆಕೆ ಆನಂದ ಸುವರ್ಣ ಹೆಸರಿನಲ್ಲಿ ಹೊಸ ಚಲನ್ ಜನರೇಟ್ ಮಾಡಿ ಒಟ್ಟು 35,213 ರೂ. ಭರಿಸಿದ್ದಳು. ಆಕೆ ಆನಂದ ಸುವರ್ಣ ನೀಡಿದ ತೆರಿಗೆ ಹಣವನ್ನು ಸರಕಾರಕ್ಕೆ ಕಟ್ಟದೇ ಚಲನ್‌ನಲ್ಲಿ ಯೂನಿಯನ್ ಬ್ಯಾಂಕ್‌ನ ಮೊಹರನ್ನು ಹಾಕಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿ ಇತರರೊಂದಿಗೆ ಸೇರಿ ಸರಕಾರಕ್ಕೆ ವಂಚನೆ ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.