ಲೋಕಬಂಧು ನ್ಯೂಸ್, ಗದಗ
ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಲಂಚ ಸ್ವೀಕರಿಸುವಾಗ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿಯನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿರುವ ಘಟನೆ ಶನಿವಾರ ನಡೆದಿದೆ.ಲಕ್ಷ್ಮೇಶ್ವರದಲ್ಲಿನ ಶಾಸಕರಿಗೆ ಸೇರಿರುವ ಬಾಲಾಜಿ ಆಸ್ಪತ್ರೆಯಲ್ಲಿ ಈ ದಾಳಿ ನಡೆದಿದೆ.
5 ಲಕ್ಷ ಲಂಚ ಸ್ವೀಕಾರ ವೇಳೆ ದಾಳಿ
ಸಂಕದಾಳ ಗ್ರಾಮದ ರಸ್ತೆ ಬದಿಯ ತಡೆಗೋಡೆ ನಿರ್ಮಾಣಕ್ಕೆ ಸುಮಾರು ಒಂದು ಕೋಟಿ ರೂ. ವೆಚ್ಚದ ಕಾಮಗಾರಿಗೆ ಸಂಬಂಧಿಸಿ ಗುತ್ತಿಗೆದಾರ ವಿಜಯ ಪೂಜಾರ ಎಂಬವರಿಗೆ ಲಂಚದ ಬೇಡಿಕೆ ಇಟ್ಟಿದ್ದಾರೆಂಬ ದೂರು ಕೇಳಿಬಂದಿತ್ತು. ಒಟ್ಟು 11 ಲಕ್ಷ ರೂ.ಗೆ ‘ಡೀಲ್’ ನಡೆದಿದ್ದು, ಅದರ ಭಾಗವಾಗಿ 5 ಲಕ್ಷ ರೂ. ಸ್ವೀಕರಿಸುವಾಗ ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ನೇತೃತ್ವದ ತಂಡ ದಾಳಿ ನಡೆಸಿದೆ.
ಹಣ ಸ್ವೀಕರಿಸುವ ಕ್ಷಣದಲ್ಲೇ ಅಧಿಕಾರಿಗಳು ಶಾಸಕರನ್ನು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.
ಆಸ್ಪತ್ರೆಯಲ್ಲಿ ಕಾರ್ಯಾಚರಣೆ
ಲಕ್ಷ್ಮೇಶ್ವರದಲ್ಲಿರುವ ಬಾಲಾಜಿ ಆಸ್ಪತ್ರೆ ಆವರಣದಲ್ಲಿ ದಾಳಿ ನಡೆದಿದ್ದು, ಅಲ್ಲಿದ್ದ ದಾಖಲೆಗಳು ಹಾಗೂ ನಗದು ಕುರಿತು ಪರಿಶೀಲನೆ ನಡೆಸಲಾಯಿತು.
ಪಿಎಗಳ ವಿಚಾರಣೆ
ಪ್ರಕರಣ ಸಂಬಂಧ ಶಾಸಕರ ಸರ್ಕಾರಿ ಪಿಎ ಮಂಜುನಾಥ ವಾಲ್ಮೀಕಿ ಹಾಗೂ ಖಾಸಗಿ ಪಿಎ ಗುರು ಲಮಾಣಿ ಅವರನ್ನೂ ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಲಂಚದ ಹಣದ ವಹಿವಾಟು, ಪೂರ್ವ ಒಪ್ಪಂದ ಹಾಗೂ ಕಾಮಗಾರಿಯ ಅನುಮೋದನೆ ಕುರಿತು ದಾಖಲೆಗಳನ್ನು ಸಂಗ್ರಹಿಸಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ಶಾಸಕ ಚಂದ್ರು ಲಮಾಣಿಯನ್ನು ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ಹಣದ ಬೇಡಿಕೆಯ ಆಡಿಯೋ/ವೀಡಿಯೋ ಸಾಕ್ಷ್ಯಗಳನ್ನೂ ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.