ಲೋಕಬಂಧು ನ್ಯೂಸ್, ಉಡುಪಿ
ನಾಟಕಗಳನ್ನು ನೋಡುವವರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿದೆ. ವೇದಿಕೆಯಲ್ಲಿ ಇರುವಷ್ಟು ವೀಕ್ಷಕರು ಇಲ್ಲದ ಪರಿಸ್ಥಿತಿ ಕೆಲವು ಕಡೆಗಳಲ್ಲಿ ಉಂಟಾಗಿದೆ. ಧಾರಾವಾಹಿಗಳು, ಮೊಬೈಲ್ ಅದಕ್ಕೆ ಕಾರಣ ಇರಬಹುದು. ರಂಗ ಚಟುವಟಿಕೆ ಜಾಸ್ತಿಯಾಗುತ್ತಾ ಹೋಗಬೇಕು ಎಂದು ರಂಗಕರ್ಮಿ ಡಾ.ಸಂಜೀವ ದಂಡೆಕೇರಿ ಆಶಿಸಿದರು.ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆ ವತಿಯಿಂದ ಭಾನುವಾರ ಭುಜಂಗ ಪಾರ್ಕ್ ಬಯಲು ರಂಗ ಮಂದಿರದಲ್ಲಿ ಹಮ್ಮಿಕೊಂಡಿರುವ 14ನೇ ವರ್ಷದ ರಂಗಹಬ್ಬ ಉದ್ಘಾಟಿಸಿ ಮಾತನಾಡಿದರು.
ಕಲಾವಿದ ಕಲಾ ಪ್ರದರ್ಶನ ನೀಡಿದ ಮಾತ್ರಕ್ಕೆ ಆತ ಪೂರ್ಣನಾಗುವುದಿಲ್ಲ. ಸಹೃದಯಿಯಾಗಿರಬೇಕು, ವಿಶಾಲ ಹೃದಯಿ ಆಗಿರಬೇಕು. ಆಗ ಮಾತ್ರ ಪೂರ್ಣ ಕಲಾವಿದನಾಗಿ ರೂಪುಗೊಳ್ಳಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಾವು ಮಾಡುವ ಉತ್ತಮ ಕಾರ್ಯ ಮತ್ತು ಜನರ ಪ್ರೀತಿ ಮಾತ್ರ ಶಾಶ್ವತ. ನಾವು ಬದುಕಿ ಸಾಯುವುದಕ್ಕಿಂತ ಸತ್ತ ಮೇಲೂ ಬದುಕುವಂತೆ ಸಾಧನೆ ಮಾಡಬೇಕು ಎಂದು ತಿಳಿಸಿದರು.
ನಾನು ಬರೆದ 'ಬಯ್ಯಮಲ್ಲಿಗೆ' ನಾಟಕ ತುಳು, ಕನ್ನಡ, ಹಿಂದಿ, ಕೊಂಕಣಿ, ಮರಾಠಿ, ಇಂಗ್ಲಿಷ್ ಭಾಷೆಗಳಲ್ಲಿ ಪ್ರದರ್ಶನಗೊಂಡಿದೆ. 28 ಸಾವಿರ ಪ್ರದರ್ಶನಗಳ ವರೆಗೆ ನಾನು ಲೆಕ್ಕ ಇಟ್ಟಿದ್ದೆ. ಆನಂತರ ಲೆಕ್ಕ ಇಟ್ಟಿಲ್ಲ. ಇದೇ ಬಯ್ಯಮಲ್ಲಿಗೆ ಸಿನಿಮಾ ಕೂಡಾ ಆಯಿತು ಎಂದು ನೆನಪು ಮಾಡಿಕೊಂಡರು.
ನಾಟಕಗಳಿಂದ ಸಮಾಜ ನಿರ್ಮಾಣ
ರಂಗ ಸಾಧಕ ಸನ್ಮಾನ ಸ್ವೀಕರಿಸಿದ ರಂಗಕರ್ಮಿ ಸಂತೋಷ್ ಶೆಟ್ಟಿ ಹಿರಿಯಡ್ಕ ಮಾತನಾಡಿ, ರಂಗಭೂಮಿ ಆಯಾ ಕಾಲಘಟ್ಟದ ಅನಿವಾರ್ಯತೆಗೆ, ತಲ್ಲಣಗಳಿಗೆ ಸ್ಪಂದಿಸುವ ಪ್ರಬಲ ಮಾಧ್ಯಮ. ಮನರಂಜನೆ ಮಾತ್ರವಲ್ಲ, ಸಾಮಾಜಿಕ ಜವಾಬ್ದಾರಿ. ಕಲಾವಿದ ತನ್ನೊಳಗೆ ಬಗೆದು ನೋಡುವ ಪ್ರಕ್ರಿಯೆ. ಸಮಾಜವನ್ನು ಕಟ್ಟುವ ಪ್ರಕ್ರಿಯೆಯೂ ಆಗಿದೆ ಎಂದರು.ರಂಗಭೂಮಿಗೆ ಪ್ರಶ್ನಿಸುವ ಮನೋಭಾವ ಇರುವುದರಿಂದ ಅದು ಆಗಾಗ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗುತ್ತದೆ. ಆದರೆ, ಇತ್ತೀಚೆಗೆ ಪ್ರಪಗಾಂಡ ನಾಟಕಗಳೂ ಬರುತ್ತಿರುವುದರಿಂದ ಎಲ್ಲ ನಾಟಕಗಳು ಒಳ್ಳೆಯವು ಎಂದು ಅದರ ಸ್ವರೂಪದ ಕಾರಣಕ್ಕಷ್ಟೇ ಗುರುತಿಸಲು ಸಾಧ್ಯವಿಲ್ಲ. ನಾಟಕ ರಚನೆಕಾರರು, ನಿರ್ದೇಶಕರು, ನಾಟಕ ಮಾಡಿಸುವವರ ಮನಸ್ಥಿತಿಯನ್ನು ಅವಲಂಬಿಸಿದೆ ಎಂದರು.
ಉಡುಪಿಯಲ್ಲಿ ಸಹೃದಯತೆ ಮತ್ತು ಸೌಹಾರ್ದ ಪರಂಪರೆ ಇದೆ. ಯು.ಎಸ್. ಪಣಿಯಾಡಿ, ಡಾ. ಟಿ.ಎಂ.ಎ ಪೈ, ಹಾಜಿ ಅಬ್ದುಲ್ಲ ಸಾಹೇಬ್ ಅದಕ್ಕೆ ಉದಾಹರಣೆ. ಅವರು ಹಾಕಿಕೊಟ್ಟ ಮೇಲ್ಪಂಕ್ತಿ ವರ್ತಮಾನ ಮತ್ತು ಭವಿಷ್ಯದ ಹಾದಿಗೆ ಬೆಳಕಾಗಬಲ್ಲದು ಎಂದವರು ಆಶಿಸಿದರು.
ಅಧ್ಯಕ್ಷತೆ ವಹಿಸಿದ್ದ ನೂತನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮಹಾಪ್ರಬಂಧಕ ಗಣೇಶ್ ಶೇರಿಗಾರ್, ಸುಮನಸಾ ಮುಂದಿನ ಪೀಳಿಗೆಯನ್ನು ಸದೃಢಗೊಳಿಸುತ್ತಿದೆ. ಇತ್ತೀಚಿನ ನಾಟಕಗಳಲ್ಲಿ ಯುವ ಪೀಳಿಗೆಗೆ ಅವಕಾಶ ನೀಡುತ್ತಿರುವುದು ಇದಕ್ಕೆ ಸಾಕ್ಷಿ. ಸುಮನಸಾ ಸಂಸ್ಥೆಯ ಸ್ವಂತ ನಿವೇಶನ, ಸ್ವಂತ ಕಟ್ಟಡದ ಕನಸು ಈಡೇರಲಿ ಎಂದು ಹಾರೈಸಿದರು.
ಸಾಕಾರ್ ಕನ್‍ಸ್ಟ್ರಕ್ಷನ್ ಪ್ರವರ್ತಕ ರಾಕೇಶ್ ಜೋಗಿ, ಉದ್ಯಮಿ ನಾಗರಾಜ್ ಸುವರ್ಣ, ಮಂಗಳೂರು ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಸಂತೋಷ್ ಉದ್ಯಾವರ, ಸುಮನಸಾ ಕೊಡವೂರು ಗೌರವಾಧ್ಯಕ್ಷ ಎಂ.ಎಸ್. ಭಟ್, ಸಂಚಾಲಕ ಭಾಸ್ಕರ ಪಾಲನ್ ಇದ್ದರು.
ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು ಸ್ವಾಗತಿಸಿ, ಸದಸ್ಯೆ ಅಂಬಿಕಾ ವಂದಿಸಿದರು. ಉಪಾಧ್ಯಕ್ಷ ಯೋಗೀಶ್ ಕೊಳಲಗಿರಿ ನಿರೂಪಿಸಿದರು.
ಬಳಿಕ ಜರ್ನಿ ಥೇಟರ್ ಗೂಪ್ ಮಂಗಳೂರು ತಂಡದಿಂದ 'ಸಾಹೇಬರು ಬರುತ್ತಾರೆ’ ನಾಟಕ ಪ್ರದರ್ಶನಗೊಂಡಿತು.