ಲೋಕಬಂಧು ನ್ಯೂಸ್, ಹೆಬ್ರಿ
ಪ್ರಕೃತಿಯ ಆರಾಧನೆಯ ತಿರುಳನ್ನು ಹೊಂದಿರುವ ನಾಗಾರಾಧನೆಯ ಬಹುರೂಪಗಳಲ್ಲಿ ಪ್ರಮುಖವಾದ ಶ್ರೀಮನ್ನಾಗಮಂಡಲವನ್ನು ಹೀಗೂ ಮಾಡಲು ಸಾಧ್ಯ ಎಂಬುದಾಗಿ ಮಾದರಿ ನಾಗಮಂಡಲೋತ್ಸವ ಆಯೋಜಿಸಿದ ಕೀರ್ತಿ ಡಾ.ಜಿ. ರಾಮಕೃಷ್ಣ ಆಚಾರ್ ಅವರಿಗೆ ಸಲ್ಲುತ್ತದೆ.ದೈವಭಕ್ತಿಯೊಂದಿಗೆ ಪ್ರಕೃತಿ ರಕ್ಷಣೆಯ ಕಾಳಜಿ ಜೊತೆಗೆ ರೈತರ ಬಗೆಗೆ ಅವರಿಗಿರುವ ಕಳಕಳಿ ಮಹೋತ್ಸವದ ಸಾಕಾರತೆಯ ತಾಯಿಬೇರಾಗಿದ್ದ ಕಾರಣ ಪ್ರಕೃತಿಯ ಮಡಿಲಲ್ಲಿ ಪ್ರಕೃತಿಗೆ ಪೂರಕವಾಗಿ ಅಪೂರ್ವವಾಗಿ ಮುನಿಯಾಲಿನ ಸಂಜೀವಿನಿ ಗೋಧಾಮದಲ್ಲಿ ಶ್ರೀಮನ್ನಾಗಮಂಡಲ ಹೆಡೆಯೆತ್ತಿ ನಿಂತು ದೊಡ್ಡ ಸಂದೇಶವೊಂದನ್ನು ಪಸರಿಸಿದೆ.ದೊಂದಿ ಬೆಳಕಿನಲ್ಲಿ ಪಾರಂಪರಿಕ ಪರಂಪರೆಯ ಬೆಳಕಿನಲ್ಲಿ ಸಾಕಾರಗೊಂಡ ನಾಗಮಂಡಲೋತ್ಸವ ಪ್ರಕೃತಿಯ ಒಡಲಲ್ಲಿ ಹೊಸ ಬೆಳಕೊಂದನ್ನು ಹೊರಸೂಸಿದೆ.
ನಾಗ, ಪ್ರಕೃತಿಯ ಪ್ರತಿರೂಪ. ನಾಗಾರಾಧನೆ ಎಂದರೆ ಕೇವಲ ಒಂದು ಧಾರ್ಮಿಕ ವಿಧಿಯಲ್ಲ; ಅದು ಮಣ್ಣಿನೊಡಲಿನ ಜೀವಸೆಲೆಗೆ ಸಲ್ಲಿಸುವ ಕೃತಜ್ಞತೆ.
ಪ್ರಕೃತಿಯನ್ನೇ ದೇವರೆಂದು ನಂಬಿದ ಮುನಿಯಾಲು ಸಂಜೀವಿನಿ ಗೋಧಾಮದ ಅಂಗಳದಲ್ಲಿ ಫೆಬ್ರವರಿ 21ರಂದು ಶನಿವಾರ ರಾತ್ರಿ ಅಕ್ಷರಶಃ ಒಂದು ದೈವೀ ಲೋಕವೇ ಅನಾವರಣಗೊಂಡಿತ್ತು. ‘ಪ್ರಕೃತಿಯಿಂದ ಪ್ರಕೃತಿಗೆ’ ಎಂಬ ಪರಿಕಲ್ಪನೆಯಡಿ ಆಧುನಿಕ ವಿದ್ಯುತ್ ದೀಪಗಳ ಝಗಮಗವಿಲ್ಲದೆ, ಸಾಂಪ್ರದಾಯಿಕ ದೊಂದಿ ಬೆಳಕಿನಲ್ಲೇ ನಡೆದ ಏಕಪವಿತ್ರ ಶ್ರೀಮನ್ನಾಗಮಂಡಲ ಸೇವೆ ಭಕ್ತರ ಕಣ್ಮನವನ್ನು ತಂಪಾಗಿಸಿತು. ಫಲಪುಷ್ಪ ತರಕಾರಿಗಳಿಂದ ಒಪ್ಪ ಓರಣಗೊಂಡ ಹಸಿರು ಚಪ್ಪರ, ಪಿಂಗಾರಗಳಿಂದ ಅಂದಗೊಂಡ ಮಂಟಪ, ನೈಸರ್ಗಿಕ ಬಣ್ಣಗಳಿಂದ ಹೊರಹೊಮ್ಮಿದ ನಾಗಮಂಡಲದ ಚಿತ್ತಾರ ಇವೆಲ್ಲವೂ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಒತ್ತಿಹೇಳುತ್ತಿತ್ತು. ಫಾಲ್ಗುಣ ಕೃಷ್ಣಪಕ್ಷದ ಕತ್ತಲೆಯನ್ನು ಸೀಳಿ ಬೆಳಗುವ ದೊಂದಿಯ ಬೆಳಕು ನಾಗದೇವನ ಸಾನ್ನಿಧ್ಯದಲ್ಲಿ ಬೆಳಗಿದಾಗ ನೆರೆದ ಸಹಸ್ರಾರು ಭಕ್ತರ ಎದೆಯಲ್ಲಿ ಭಾವಭಕ್ತಿಯ ಅಲೆ ಸ್ಪುರಣಗೊಂಡಿತ್ತು.
ಸುಮಾರು 5 ಸಾವಿರ ಅಡಕೆ ಗಿಡಗಳ ಮೊಳಕೆ ಬೀಜದ ಉಂಡೆಗಳನ್ನು ಭಕ್ತರಿಗೆ ಪ್ರಸಾದ ರೂಪವಾಗಿ ನೀಡುವ ಮೂಲಕ ಉತ್ಸವದ ಜೊತೆಗೆ ಪ್ರಕೃತಿಯನ್ನು ಉಳಿಸಿ ಬೆಳೆಸುವ ಸಂಕಲ್ಪದ ಸಾಕ್ಷಾತ್ಕಾರವಾಯಿತು.
ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ನೇತೃತ್ವದಲ್ಲಿ ಮಂತ್ರಘೋಷದ ನಡುವೆ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆ ಮತ್ತು ಭಕ್ತಿಯ ಪರಾಕಾಷ್ಠೆಗೆ ಸಾಕ್ಷಿಯಾಗಿತ್ತು.
ವೈದ್ಯರ ಡಮರಿನ ಧ್ವನಿಗೆ ನಾಗಪಾತ್ರಿ ಕುಂಜಿತ್ತಾಯರ ಹೆಜ್ಜೆಗೆ ತಕ್ಕಂತೆ ಮೊಳಗಿದ ನಾದಸ್ವರ ನೆರೆದ ಭಕ್ತರ ಕಲ್ಪನೆಯ ಸಾಕ್ಷಾತ್ ನಾಗಲೋಕವೇ ಧರೆಗಿಳಿದು ಬಂದಂತೆ ಭಾಸವಾಗಿತ್ತು!
ಸಹಸ್ರಾರು ಮಂದಿ ಭಕ್ತರು ಈ ದೈವೀಕ್ಷಣಗಳಿಗೆ ಸಾಕ್ಷಿಯಾದರು. ಅನೇಕ ಗಣ್ಯರ ಉಪಸ್ಥಿತಿ ಕಾರ್ಯಕ್ರಮಕ್ಕೆ ಮೆರುಗು ನೀಡಿತ್ತು.
ಮುನಿಯಾಲು ಸಂಜೀವಿನಿ ಗೋಧಾಮದ ಪ್ರವರ್ತಕ ಎಸ್ ಕೆ.ಎಫ್ ಡಾ.ಜಿ.ರಾಮಕೃಷ್ಣ ಆಚಾರ್ ಕುಟುಂಬಿಕರ ಶ್ರದ್ಧೆ ಹಾಗೂ ದೇವಿಪ್ರಸಾದ್ ಶೆಟ್ಟಿ ನೇತೃತ್ವದ ನಾಗಮಂಡಲ ಸಮಿತಿ ಪರಿಶ್ರಮ ಒಟ್ಟೂ ಕಾರ್ಯಕ್ರಮಕ್ಕೆ ನವನವೀನ ಆಯಾಮ ನೀಡಿತ್ತು.