ಲೋಕಬಂಧು ನ್ಯೂಸ್, ಉಡುಪಿ
ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯಕ್ಕೆ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕಾರ್ಮಿಕ ಕಾರ್ಡ್ ನೀಡುತ್ತಿದ್ದು, ಈ ಕುರಿತ ಮಾಹಿತಿ ಕಾರ್ಯಕ್ರಮ ಫೆ.2ರಂದು ನಗರದ ಗೋವಿಂದ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಶ್ರೀಕಾಂತ ಉಪಾಧ್ಯಾಯ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಫೆ. 2ರಂದು ಸಂಜೆ 4 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ನಿರ್ದೇಶಕ ಪಿ.ಎಂ. ಮಾಲತೇಶ್ ಮಾಹಿತಿ ನೀಡಲಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಜ್ಯೋತಿ ಹೆಬ್ಬಾರ್ ಭಾಗವಹಿಸಲಿದ್ದಾರೆ.
18ರಿಂದ 60 ವರ್ಷ ವಯಸ್ಸಿನ ಇಎಸ್‌ಐ ಮತ್ತು ಇಪಿಎಫ್ ಸೌಲಭ್ಯ ಹೊಂದಿರದವರು ಕಾರ್ಡ್ ಪಡೆಯಲು ಅರ್ಹರು.ವಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ರೇಶನ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ಜೊತೆಗೆ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಬೇಕು ಎಂದು ಮಾಹಿತಿ ನೀಡಿದರು.
ಈ ಕಾರ್ಡುದಾರರು ಅಪಘಾತದಿಂದ ಮರಣ ಹೊಂದಿದರೆ ಅವರ ನಾಮನಿರ್ದೇಶಿತರಿಗೆ 1 ಲಕ್ಷ ಪರಿಹಾರ, 50 ಸಾವಿರ ವರೆಗೆ ಆಸ್ಪತ್ರೆ ವೆಚ್ಚ ಭರಿಸಲು ಸಹಕಾರಿಯಾಗಲಿದೆ.
ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಸಿಗುವ ಈ ಸೌಲಭ್ಯಗಳು ಬ್ರಾಹ್ಮಣ ಸಮುದಾಯದ ಅರ್ಚಕರು, ಸಹಾಯಕರು, ಅಡುಗೆಯವವರು, ಜ್ಯೋತಿಷಿಗಳು ಹಾಗೂ ಅಸಂಘಟಿತ ವಲಯದ ಬ್ರಾಹ್ಮಣರಿಗೆ ಸಿಗಲಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಬ್ರಾಹ್ಮಣ ಸಮುದಾಯದ ಮುಖಂಡರಾದ ದುರ್ಗಾಪ್ರಸಾದ್ ಭಾರ್ಗವ್, ಪ್ರೊ.ಶಂಕರ್, ಶ್ರೀನಿವಾಸ ಬಲ್ಲಾಳ್, ಹಯವದನ ಭಟ್ ಹಾಗೂ ರಾಜೇಂದ್ರ ಭಟ್ ಇದ್ದರು.
