ಲೋಕಬಂಧು ನ್ಯೂಸ್, ಉಡುಪಿ
ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಮಕ್ಕಳು ಮತ್ತು ಅವರ ಪಾಲಕರು ಹಾಗೂ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಧೈರ್ಯ ತುಂಬುವ ನಿಟ್ಟಿನಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ವಿಭಾಗ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆ ಮಾಡಲಾಯಿತು.ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕೆಎಂಸಿ ಮಣಿಪಾಲದ ಡೀನ್ ಡಾ.ಅನಿಲ್ ಕೆ. ಭಟ್, ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಬಾಲ್ಯ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಸಮುದಾಯದ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಪ್ರತಿಯೊಬ್ಬ ಮಗುವಿಗೂ ಅಗತ್ಯವಾದ ಸಮಗ್ರ ಚಿಕಿತ್ಸೆ ದೊರೆಯುವಂತೆ ಸಹಕಾರಾತ್ಮಕ ಪ್ರಯತ್ನಗಳ ಅಗತ್ಯತೆಯನ್ನು ಒತ್ತಿಹೇಳಿದರು.
ಆಸ್ಪತ್ರೆಯ ಮಕ್ಕಳ ಕ್ಯಾನ್ಸರ್ ವಿಭಾಗ ಮುಖ್ಯಸ್ಥ ಡಾ.ವಾಸುದೇವ ಭಟ್ ಕೆ., ಬಾಲ್ಯ ಕ್ಯಾನ್ಸರ್‌ನ್ನು ಸಮಯಕ್ಕೆ ಸರಿಯಾಗಿ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ನರ್ಸಿಂಗ್ ವಿಭಾಗ ಮುಖ್ಯಸ್ಥೆ ಡಾ.ಸುಬಾ ಸೂರಿಯಾ, ಸೇವ್ ಲೈಫ್ ಚಾರಿಟೆಬಲ್ ಟ್ರಸ್ಟ್ ಸಂಸ್ಥಾಪಕ ಅರ್ಜುನ್ ಭಂಡಾರ್ಕರ್ ಹಾಗೂ ಲಯನ್ಸ್ ಕ್ಲಬ್ ಮಣಿಪಾಲ ಅಧ್ಯಕ್ಷ ಡಾ.ನಿಶಾಂತ್ ಬಿ. ಭಟ್ ಉಪಸ್ಥಿತರಿದ್ದರು.
ಅಸ್ಥಿಮಜ್ಜೆ ಕಸಿ ಬಳಿಕ ಕ್ಯಾನ್ಸರ್‌ನಿಂದ ಗುಣಮುಖರಾದ ಚೈತ್ರಾ ಮತ್ತು ಫರ್ಹಾನಾ ಕಾರ್ಯಕ್ರಮ ನಿರೂಪಿಸಿದರು.