ನಾಗರಿಕರ ಮೂಲಭೂತ ಹಕ್ಕುಗಳ ಸಂರಕ್ಷಣೆ ಅಧಿಕಾರಿಗಳ ಕರ್ತವ್ಯ

ಉಡುಪಿ | ಲೋಕಬಂಧು ನ್ಯೂಸ್
ನಾಗರಿಕರಿಗೆ ನೀಡಿರುವ ಮೂಲಭೂತ ಹಕ್ಕುಗಳೇ ಮಾನವ ಹಕ್ಕುಗಳಾಗಿದ್ದು, ಅವುಗಳ ಸಂರಕ್ಷಣೆ ಮಾಡುವುದು ಸರಕಾರಿ ಅಧಿಕಾರಿಗಳ ಕರ್ತವ್ಯ. ಅವುಗಳ ಉಲ್ಲಂಘನೆಯಾದಲ್ಲಿ ಸಾರ್ವಜನಿಕರು ಆಯೋಗಕ್ಕೆ ದೂರು ನೀಡಬಹುದು ಎಂದು ಕರ್ನಾಟಕರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಹೇಳಿದರು.
ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ ಉಡುಪಿ ಹಾಗೂ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಬೆಂಗಳೂರು ವತಿಯಿಂದ ಗುರುರಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಕರಣಗಳ ವಿಲೇವಾರಿ, ಸಾರ್ವಜನಿಕ ಅಹವಾಲು ಸ್ವೀಕಾರ ಮತ್ತು ದೂರುಗಳ ವಿಚಾರಣೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಸರಕಾರಿ ಅಧಿಕಾರಿಗಳು ಮಾನವ ಹಕ್ಕುಗಳ ಸಂರಕ್ಷಣಾಧಿಕಾರಿಗಳಾಗಿದ್ದು, ಜನಸಾಮಾನ್ಯರ ಮಾನವ ಹಕ್ಕುಗಳಿಗೆ ಧಕ್ಕೆ ಉಂಟಾಗದಂತೆ ನೋಡಿಕೊಳ್ಳಬೇಕು. ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ಅಹವಾಲುಗಳನ್ನು ಇಲಾಖಾಧಿಕಾರಿಗಳ ಮುಂದೆ ತಂದಾಗ ಅವರೊಂದಿಗೆ ಸೌಜನ್ಯ ಹಾಗೂ ಸಂಯಮದೊಂದಿಗೆ ನಡೆದು, ದೂರು ಆಲಿಸಿ, ನಿಯಮಾನುಸಾರ ಅವುಗಳನ್ನು ಬಗೆಹರಿಸಲು ಮುಂದಾಗಬೇಕು ಎಂದರು.


ಸಾರ್ವಜನಿಕರು ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ ಆಯೋಗದ ಮುಂದೆ ದೂರು ಸಲ್ಲಿಸುತ್ತಾರೆ. ದೂರುಗಳಿಗೆ ಸಂಬಂಧಿಸಿದಂತೆ ವರದಿ ನೀಡಲು ಸಕಾಲದಲ್ಲಿ ನೋಟಿಸ್ ನೀಡಬೇಕು. ಅವುಗಳನ್ನು ಪರಿಶೀಲಿಸಿದಾಗ ಒಂದೊಮ್ಮೆ ತಪ್ಪು ಮಾಡಿರುವುದು ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸರಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಕೆಲವೊಂದು ಗಂಭೀರ ಪ್ರಕರಣಗಳಲ್ಲಿ ಪರಿಹಾರ ಒದಗಿಸಲೂ ಶಿಫಾರಸ್ಸು ಮಾಡಲಾಗುವುದು ಎಂದರು.


ಆಯೋಗದ ಸದಸ್ಯ ಎಸ್.ಕೆ ವಂಟಿಗೋಡಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯೂ ಹುಟ್ಟಿನಿಂದಲೇ ನೈಸರ್ಗಿಕವಾಗಿ ಮಾನವ ಹಕ್ಕುಗಳನ್ನು ಪಡೆದಿರುತ್ತಾನೆ. ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಗೌರವಯುತವಾಗಿ ಬದುಕುವ ಹಕ್ಕು ಇದೆ. ಅದು ಉಲ್ಲಂಘನೆಯಾದ ಸಂದರ್ಭದಲ್ಲಿ ಅವುಗಳನ್ನು ಪ್ರಶ್ನಿಸುವ ಹಕ್ಕು ಕೂಡಾ ಇದೆ ಎಂದರು.


ಸರಕಾರ ಜನಸಾಮಾನ್ಯರ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಅವು ಅರ್ಹರಿಗೆ ತಲುಪುವಂತಾಗಬೇಕು. ಅನರ್ಹರಿಗೆ ತಲುಪದಂತೆ ಎಚ್ಚರಿಕೆ ವಹಿಸಬೇಕು ಎಂದ ಅವರು,


ಒಂದೊಮ್ಮೆ ಕಾನೂನಿನಡಿ ಸೇವೆ ಪಡೆಯಲು ಹಕ್ಕು ಹೊಂದಿದ್ದು, ಅವುಗಳನ್ನು ನೀಡಲು ವಿಳಂಬ ಮಾಡುವುದು ಈ ಕಾನೂನಿನ ಉಲ್ಲಂಘನೆಯಾಗಿದೆ ಎಂದರು.


ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, ಇತರ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಉಡುಪಿ ಜಿಲ್ಲೆ ಭೌಗೋಳಿಕವಾಗಿ ವ್ಯತ್ಯಾಸವಿದೆ. ಸರಕಾರದ ಕೆಲವು ಯೋಜನೆ, ಕಾರ್ಯಕ್ರಮಗಳು ಹಾಗೂ ನಿಯಮಾವಳಿಗಳನ್ನು  ಅನುಷ್ಠಾನಗೊಳಿಸಲು ಕೆಲವೊಂದು ಮಾರ್ಪಾಡುಗಳು ಹಾಗೂ ವಿನಾಯಿತಿ ನೀಡುವ ಅಗತ್ಯ ಇದೆ. ಜಿಲ್ಲೆಯಲ್ಲಿ ಹೆಚ್ಚಿನ ಇಲಾಖೆಗಳಲ್ಲಿ ಸಿಬ್ಬಂದಿಯ ಕೊರತೆ ಇದೆ. ಈ ಹಿಂದೆ 3 ತಾಲೂಕು ಇದ್ದ ಉಡುಪಿ ಜಿಲ್ಲೆ ಪ್ರಸ್ತುತ 7 ತಾಲೂಕಾಗಿ ಮಾರ್ಪಟ್ಟಿದ್ದರೂ ಅಧಿಕಾರಿ ಹಾಗೂ ಸಿಬ್ಬಂದಿ ತಮ್ಮ ಕರ್ತವ್ಯಗಳನ್ನು ಎಲ್ಲಾ ಇಲಾಖೆಗಳಲ್ಲಿ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲಿಸ್ ಅಧೀಕ್ಷಕ ಹರಿರಾಮ್ ಶಂಕರ್, ಡಿ.ಎಫ್.ಓ ರುಥ್ರೇನ್ ಪಿ, ವೈಲ್ಡ್‌ಲೈಫ್ ಡಿ.ಎಫ್.ಓ ಶಿವರಾಮ್ ಎಂ. ಬಾಬು, ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳು, ತಹಶೀಲ್ದಾರರುಗಳು ಮೊದಲಾದವರಿದ್ದರು.