ಜಿಲ್ಲಾಸ್ಪತ್ರೆಗೆ ಭೇಟಿಯಿತ್ತ ಮಾನವ ಹಕ್ಕುಗಳ ಆಯೋಗ

ಉಡುಪಿ | ಲೋಕಬಂಧು ನ್ಯೂಸ್
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಹಾಗೂ ಸದಸ್ಯ ಎಸ್.ಕೆ. ವಂಟಿಗೋಡಿ ಗುರುವಾರ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ವೀಕ್ಷಣೆ ನಡೆಸಿ, ಕೆಲವೊಂದು ಸಲಹೆ ಸೂಚನೆಗಳನ್ನು ನೀಡಿದರು.
ಜಿಲ್ಲಾಸ್ಪತ್ರೆಯ ನೋಂದಣಿ ಕೇಂದ್ರ, ರೋಗಿಗಳ ವಾರ್ಡ್, ತೀವ್ರ ನಿಗಾ ಘಟಕ, ಔಷಧಿ ಉಗ್ರಾಣ, ಆಸ್ಪತ್ರೆಯ ಸ್ವಚ್ಛತೆ ಬಗ್ಗೆ ಪರಿಶೀಲಿಸಿದರು.


ಈ ಸಂರ್ದದಲ್ಲಿ ಮಾತನಾಡಿ, ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ರೋಗಿಗಳು ತಮ್ಮ ಹೆಸರು ನೋಂದಾಯಿಸಲು ಹೆಚ್ಚು ಜನರು ಸರದಿಯ ಸಾಲಿನಲ್ಲಿ ನಿಂತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಜಿಲ್ಲಾ ಸರ್ಜನ್ ಅವರಿಗೆ ನೋಂದಣಿ ಕೌಂಟರ್'ಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ಇನ್ನೂ ಹೆಚ್ಚು ನೋಂದಣಿ ಕೌಂಟರ್'ಗಳನ್ನು ಸ್ಥಾಪಿಸಲು ತಿಳಿಸಿದ ಅವರು, ಆಸ್ಪತ್ರೆಯ ಚಿಕಿತ್ಸೆಗೆ ಬಂದಿರುವ ರೋಗಿಗಳಿಂದ ಚಿಕಿತ್ಸೆ ನೀಡುವ ಬಗ್ಗೆ ಮಾಹಿತಿ ಕೇಳಿ ಪಡೆದರು.


ಆಸ್ಪತ್ರೆಯ ಸ್ವಚ್ಛತೆ, ಶುಭ್ರತೆ ಪರಿಶೀಲಿಸಿ, ಕಾರಿಡಾರ್'ಗಳಲ್ಲಿ ಲೈಟ್ ಅಳವಡಿಸಲು ಸೂಚನೆ ನೀಡಿದರು.


ರಾಜ್ಯದ ಔಷಧಿ ಕೇಂದ್ರಗಳಿಂದ ಸರಬರಾಜಾದ ಔಷಧಿ ಮತ್ತಿತರ ಪರಿಕರಗಳನ್ನು ಉಗ್ರಾಣದ ಒಳಭಾಗದಲ್ಲಿಡದೇ ಕಾರಿಡಾರ್'ಗಳಲ್ಲಿ ದಾಸ್ತಾನು ಮಾಡಿರುವ ಬಗ್ಗೆ ಪ್ರಶ್ನಿಸಿದ ಅವರು, ಔಷಧಿ ಅವಧಿಗೆ ಮುನ್ನವೇ ಜನಸಾಮಾನ್ಯರಿಗೆ ಉಪಯೋಗಕ್ಕೆ ಬರುವಂತೆ ಕ್ರಮ ವಹಿಸಬೇಕು ಎಂದರು.


ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾಸ್ಪತ್ರೆಯ ಕಾಮಗಾರಿ ಬಗ್ಗೆ ಮಾಹಿತಿ ಪಡೆದ ಅವರು, ಆಸ್ಪತ್ರೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಆಸ್ಪತ್ರೆಗೆ ಅವಶ್ಯವಿರುವ ಸಿಬ್ಬಂದಿ ಹಾಗೂ ಹೆಚ್ಚುವರಿ ಬೇಡಿಕೆಗಳಿಗಾಗಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲು ತಿಳಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ. ಅಶೋಕ್, ನಿವಾಸಿ ವೈದ್ಯಾಧಿಕಾರಿ ಡಾ. ವಾಸುದೇವ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ವಾರ್ತಾಧಿಕಾರಿ ಮಂಜುನಾಥ್ ಬಿ. ಹಾಗೂ ಆಸ್ಪತ್ರೆಯ ಸಿಬ್ಬಂದಿ ಮೊದಲಾದವರಿದ್ದರು.