ಯುವ ಜನತೆಯನ್ನು ಕೃಷಿಯತ್ತ ಆಕರ್ಷಿಸಲು ಹೊಸ ಪಠ್ಯಕ್ರಮ ಅಗತ್ಯ

ಲೋಕಬಂಧು ನ್ಯೂಸ್, ಹೆಬ್ರಿ
ಕೃಷಿ ನಮ್ಮ ಅನ್ನದ ಭಾಗ್ಯ, ಕೃಷಿ ಬಿಟ್ಟರೆ ಜೀವನವೇ ಇಲ್ಲ, ಯುವ ಸಮುದಾಯವನ್ನು ಕೃಷಿಯತ್ತ ಆಕರ್ಷಿಸಲು ಸರ್ಕಾರ ಹೊಸ ಪಠ್ಯಕ್ರಮ ರೂಪಿಸಿ ಪ್ರೋತ್ಸಾಹಿಸಬೇಕಾಗಿದೆ ಎಂದು ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಸರ್ಕಾರಕ್ಕೆ ಸಲಹೆ ನೀಡಿದರು.ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲ ಸಂದರ್ಭದಲ್ಲಿ ಶುಕ್ರವಾರ ಆಯೋಜಿಸಲಾದ ಕೃಷಿ ಮಂಡಲ- ಕೃಷಿ ವಿಚಾರಗೋಷ್ಟಿ ಉದ್ಘಾಟಿಸಿ ಮಾತನಾಡಿದರು.
ಕೃಷಿಗೆ ಗಮನ ನೀಡುವುದು ಇಂದಿನ ಅಗತ್ಯವಾಗಿದೆ. ನಾವು ವಿವಿಧ ರೀತಿಯಲ್ಲಿ ಹಣ ಗಳಿಸಬಹುದು.‌ ಆದರೆ, ಹಣವನ್ನು ತಿನ್ನಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ
ಕೃಷಿ ಅನಿವಾರ್ಯವಾಗಲಿದೆ ಎಂದರು.
ಕೃಷಿಯ ಜೊತೆಗೆ ರೈತರನ್ನು ಪ್ರೋತ್ಸಾಹಿಸುವ ರಾಮಕೃಷ್ಣ ಆಚಾರ್ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ಕೃಷಿಗೆ ವಿಶೇಷವಾಗಿ ಆದ್ಯತೆ ನೀಡಿ ರೈತರಿಗೆ 'ರೈತಪೀಠ' ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ದೇಶವನ್ನು ಗೌರವಿಸಿದಂತೆ. ಅದರಿಂದ ಕೃಷಿಗೆ ಇನ್ನಷ್ಟು ಪ್ರೇರಣೆ ನೀಡಿದಂತಾಗುತ್ತದೆ ಎಂದರು.


ಪ್ರಥಮ ಕೃಷಿ ವಿಚಾರಗೋಷ್ಟಿಯಲ್ಲಿ 'ಕರಾವಳಿಯ ಕೃಷಿ ಬಹುತ್ವ ಮತ್ತು ಧಾರ್ಮಿಕ ನಂಬಿಕೆಗಳು'  ನಿವೃತ್ತ ಪ್ರಾಧ್ಯಾಪಕ ಹಾಗೂ ಕೃಷಿ ಲೇಖಕ ಡಾ.ನರೇಂದ್ರ ರೈ ದೇರ್ಲ ಮಾತನಾಡಿ, ನಾಗಮಂಡಲದಲ್ಲಿ ಪ್ರಪ್ರಥಮವಾಗಿ ಕೃಷಿ ವಿಚಾರ- ಕೃಷಿ ಮಂಡಲ ಮಾಡಿಸಿದ ಕೀರ್ತಿ ರಾಮಕೃಷ್ಣ ಆಚಾರ್ ಅವರಿಗೆ ಸಲ್ಲುತ್ತದೆ. ಈ ನೆಲದ ಎಲ್ಲಾ ಸಂಸ್ಕೃತಿಗೂ ಕೃಷಿಯೇ ಮೂಲ ಸಂಸ್ಕೃತಿ ಆಗಿದೆ. ಯುವ ಸಮುದಾಯ ಮುಂದೆ ಕೃಷಿಯನ್ನು ಲಾಭದಾಯಕವಾಗಿ ಮಾಡಿ ಉಳಿಸಿ ಬೆಳೆಸುವ ಅನಿವಾರ್ಯತೆ ಎದುರಾಗಿದೆ ಎಂದರು.


ಮುನಿಯಾಲು ಸಂಜೀವಿನಿ ಗೋಧಾಮದ ಸಂಸ್ಥಾಪಕ ಡಾ.ಜಿ. ರಾಮಕೃಷ್ಣ ಆಚಾರ್, ನಿವೃತ್ತ ಪ್ರಾಂಶುಪಾಲ ಬಾಲಕೃಷ್ಣ ಶೆಟ್ಟಿ, ಶ್ರೀಮನ್ನಾಗಮಂಡಲ ಸೇವಾ ಸಮಿತಿ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಶೆಟ್ಟಿ ಕಾರ್ಕಳ ಮತ್ತು ದಾಮೋದರ ಶರ್ಮ ಬಾರ್ಕೂರು, ಅರವಿಂದ ಆಚಾರ್ಯ ಬೆಳುವಾಯಿ, ಪ್ರಭಾಕರ ಆಚಾರ್ಯ ಗುಡ್ಡೆಯಂಗಡಿ, ಮಾರ್ಗದರ್ಶಕರಾದ ಸುಕೇಶ ಹೆಗ್ಡೆ ಕಡ್ತಲ, ಮುನಿಯಾಲು ದಿನೇಶ ಪೈ, ಸಂತೋಷ ಆಮೀನ್‌, ಜ್ಯೋತಿ ಹರೀಶ್‌, ಗೋಪಿನಾಥ ಭಟ್‌ ಮುನಿಯಾಲು ಮೊದಲಾದವರಿದ್ದರು.

ರೈತರನ್ನು ಗೌರವಿಸುವ ದಿನ ಬರಲಿದೆ
ರೈತರನ್ನು ಸರ್ಕಾರಗಳೂ ಸೇರಿದಂತೆ ಎಲ್ಲರೂ ಕಡೆಗಣಿಸುತ್ತಿದ್ದಾರೆ. ಆದರೆ, ಎಲ್ಲರೂ ಸೇರಿ ಗೌರವಿಸುವ ದಿನಗಳು ಹತ್ತಿರದಲ್ಲಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ಕೃಷಿಕ, ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ ಹೇಳಿದರು.


ಯುವಜನತೆ ಮತ್ತು ಭವಿಷ್ಯದಲ್ಲಿ ಕೃಷಿ ಸಾಧ್ಯತೆಗಳ ಬಗ್ಗೆ ಪುತ್ತೂರು ಗ್ರಾಮಜನ್ಯದ ನಿರಂಜನ ಪೊಳ್ಯ ಮಾತನಾಡಿದರು.


ಹೊಸ ತಲೆಮಾರಿನ ಕೃಷಿ ಮತ್ತು ಹಳ್ಳಿ ವಾಪಸಾತಿಯ ಅನುಭವದ ಬಗೆಗೆ ಪ್ರಯೋಗಶೀಲ ಕೃಷಿಕ ಮೈರುಗ ಕುರುಡಪದವಿನ ಪ್ರವೀಣ್‌ ಕೇಶವ್‌ ಮಾತನಾಡಿದರು.


ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ.ಧನಂಜಯ್‌ ಅಧ್ಯಕ್ಷತೆ ವಹಿಸಿದ್ದರು.


ಶ್ರೀಕಾಂತ ಶೆಟ್ಟಿ ಕಾರ್ಕಳ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಣೂತ್‌ ಆರ್‌. ಗಾಣಿಗ ನಿರೂಪಿಸಿದರು.