ಲೋಕಬಂಧು ನ್ಯೂಸ್, ಉಡುಪಿ
ಅಂಬೇಡ್ಕರ್ ಆವಾಜ್ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ 9 ಲಕ್ಷ, ಬಸವ ಇಂದಿರಾ ಆವಾಜ್ ಯೋಜನೆಯಡಿ 5 ಲಕ್ಷ ಸಹಾಯಧನ ನೀಡುವಂತೆ ಒತ್ತಾಯಿಸಿ ಹಾಗೂ ಬ್ರಹ್ಮಾವರದ ಹನೆಹಳ್ಳಿ ಕೃಷ್ಣ ಶೂಟೌಟ್ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿ ಸಮತಾ ಸೈನಿಕ ದಳ ವತಿಯಿಂದ ಗುರುವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಯಿತು.ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿಯಿಂದ ಕಪ್ಪು ಪಟ್ಟಿ ಧರಿಸಿ ಕಾಲ್ನಡಿಗೆ ಮೂಲಕ ಕಾಂಗ್ರೆಸ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರನ್ನು ಬ್ರಹ್ಮಗಿರಿ ಜಂಕ್ಷನ್'ನಲ್ಲಿ ತಡೆಯಲಾಯಿತು.
ಬ್ರಹ್ಮಗಿರಿ ರಿಕ್ಷಾ ನಿಲ್ದಾಣ ಬಳಿ ಪ್ರತಿಭಟನಾ ಸಭೆ ನಡೆಸಿದ ಪ್ರತಿಭಟನಾಕಾರರು, ತಮ್ಮ ಬೇಡಿಕೆಗಳನ್ನು ಆಲಿಸಲು ಉಸ್ತುವಾರಿ ಸಚಿವರು ಆಗಮಿಸುವಂತೆ ಒತ್ತಾಯಿಸಿದರು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವನಾಥ ಪೇತ್ರಿ, ರಾಜ್ಯದೆಲ್ಲೆಡೆ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗದವರು ಸರಿಯಾದ ಸೂರು ಇಲ್ಲದೇ ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಸರ್ಕಾರ ಮನೆ ನಿರ್ಮಾಣಕ್ಕೆ 2 ಲಕ್ಷ ರೂ. ನೀಡುತ್ತಿದ್ದು, ಇದು ಮನೆಯ ಪಂಚಾಂಗ ಹಾಕುವುದಕ್ಕೂ ಸಾಕಾಗುತ್ತಿಲ್ಲ. ದಿನನಿತ್ಯ ಶಿಲೆಕಲ್ಲು, ಮರಳು, ಸಿಮೆಂಟ್ ಬೆಲೆ ಏರಿಕೆಯಾಗುತ್ತಿದೆ. ಇಂದಿನ ಪರಿಸ್ಥಿತಿಯಲ್ಲಿ 600 ಚದರ ಅಡಿ ಮನೆ ನಿರ್ಮಾಣಕ್ಕೆ 20 ಲಕ್ಷ ರೂ. ಖರ್ಚಾಗಲಿದೆ. ಹಾಗಾಗಿ ಸರ್ಕಾರ ಅಂಬೇಡ್ಕರ್ ಆವಾಜ್ ಮನೆ ನಿರ್ಮಾಣಕ್ಕೆ 9 ಲಕ್ಷ, ಬಸವ ಇಂದಿರಾ ಆವಾಜ್ ಯೋಜನೆಯಡಿ 5 ಲಕ್ಷ ಸಹಾಯ ಘೋಷಿಸುವಂತೆ ಒತ್ತಾಯಿಸಿದರು.
ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ 2 ವರ್ಷಗಳ ಹಿಂದೆ ದಿನಕೂಲಿ ಕಾರ್ಮಿಕ ಕೃಷ್ಣ ಎಂಬಾತನನ್ನು ಗುಂಡಿಕ್ಕಿ ಕೊಲೆಗೈದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪೊಲೀಸ್ ಇಲಾಖೆಗೆ ಈವರೆಗೆ ಸಾಧ್ಯವಾಗಿಲ್ಲ. ಹಾಗಾಗಿ ಪ್ರಕರಣವನ್ನು ಸಿಓಡಿಗೆ ಒಪ್ಪಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಪ್ರಮುಖರಾದ ರಮೇಶ್ ಕಾಂಚನ್ ಹಾಗೂ ಕಿಶನ್ ಹೆಗ್ಡೆ ಕೊಳ್ಳೆಬೈಲ್, ಪ್ರತಿಭಟನಾಕಾರರ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಮತಾ ಸೈನಿಕ ದಳದ ಗಣೇಶ್ ಸಾಲಿಯಾನ್, ಜ್ಯೋತಿ ಶಿರಿಯಾರ, ವಿಶ್ಲೇಶ್ ಬ್ರಹ್ಮಾವರ, ಸತೀಶ್ ಜನ್ನಾಡಿ ಮೊದಲಾದವರು ಭಾಗವಹಿಸಿದ್ದರು.
ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿತ್ತು.