ಉಡುಪಿ | ಲೋಕಬಂಧು ನ್ಯೂಸ್
ಧೈರ್ಯ, ಶೌರ್ಯ ಹಾಗೂ ಧೀಮಂತ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ್ ತನ್ನ ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದ್ದ ಕೌಶಲ್ಯಗಳು ಅವರ ದೂರದೃಷ್ಟಿ ನಾಯಕತ್ವಕ್ಕೆ ಸಾಕ್ಷಿ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತು ಮತ್ತು ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘ ಉಡುಪಿ ಸಂಯುಕ್ತಾಶ್ರಯದಲ್ಲಿ ಗುರುವಾರ ನಡೆದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಶಿವಾಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಚಿಕ್ಕ ವಯಸ್ಸಿನಲ್ಲಿಯೇ ಆಸಾಧಾರಣ ನಾಯಕತ್ವ ಗುಣಗಳನ್ನು ಹೊಂದಿದ್ದ ಶಿವಾಜಿ, ತಾಯಿಯ ಪ್ರೇರಣೆಯಿಂದ ಉತ್ತಮ ವ್ಯಕ್ತಿತ್ವವನ್ನು ಮೈಗೊಡಿಸಿಕೊಂಡು ಮಹಿಳೆಯರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಸಮ ಸಮಾಜ ನಿರ್ಮಾಣಕ್ಕೆ ಶಕ್ತಿ ತುಂಬಲು ಪ್ರಯತ್ನಿಸಿದ್ದರು.
ಛತ್ರಪತಿ ಶಿವಾಜಿ ಆಡಳಿತ ಪ್ರಗತಿಪರ ನೀತಿ ಹಾಗೂ ದಕ್ಷ ಆಡಳಿತದಿಂದ ಗುರುತಿಸಲಟ್ಟಿದ್ದು, ತನ್ನ ಆಡಳಿತಾವಧಿಯಲ್ಲಿ ಜನರ ಭಾವನೆಗಳನ್ನು ಅರ್ಥೈಸಿಕೊಂಡ ಅವರು ಅಂದಿನ ದಿನಗಳಲ್ಲಿಯೇ ಸಂವಿಧಾನದಡಿ ಬದುಕಲು ಅವಕಾಶ ಮಾಡಿಕೊಟ್ಟಿದ್ದರು. ವೈರಿಗಳಿಂದ ಕರಾವಳಿಯನ್ನು ರಕ್ಷಿಸಲು ಸಮುದ್ರದಲ್ಲಿ ಬಲಿಷ್ಠ ನೌಕಾಪಡೆ ಸನ್ನದ್ಧಗೊಳಿಸಿದ್ದರು. ಜಾತಿ, ಧರ್ಮ ಭೇದ ಮೀರಿ ನೌಕಾಪಡೆಯಲ್ಲಿ ಅರ್ಹತೆಯ ಮೇಲೆ ಸಿಬ್ಬಂದಿಗಳನ್ನು ನೇಮಿಸುವ ಮೂಲಕ ಸಮಗ್ರ ಆಡಳಿತಕ್ಕೆ ಉತ್ತೇಜನ ನೀಡಿದ್ದರು ಎಂದರು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ನಾಡು ನುಡಿಗೆ ಸೇವೆ ಸಲ್ಲಿಸಿದ ಸಾಧಕರನ್ನು ಮುಂದೆಯೂ ಮರೆಯಬಾರದೆಂಬ ನೆಲೆಯಲ್ಲಿ ಹಾಗೂ ಅವರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸರಕಾರದ ವತಿಯಿಂದ ಜಯಂತಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿದೆ. ಮಹನೀಯರ ಆದರ್ಶಗಳು, ಜೀವನ ಚರಿತ್ರೆಗಳು ಯುವಪೀಳಿಗೆಗೆ ದಾರಿದೀಪವಾಗಲಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಹೊಂದಿ ಸತ್ಪ್ರಜೆಗಳಾಗಿ ಬಾಳುವುದರೊಂದಿಗೆ ಭವ್ಯ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕುವಂತಾಗಬೇಕು ಎಂದರು.
ಮಣಿಪಾಲ ಎಂಐ.ಟಿ. ವಿಶ್ರಾಂತ ಪ್ರಾಧ್ಯಾಪಕ ಡಾ. ನಾರಾಯಣ ಶೆಣೈ ಉಪನ್ಯಾಸ ನೀಡಿ, ಕ್ರಿ.ಶ. 1640ರ ಫೆ.19 ಅಂದರೆ ಸುಮಾರು 396 ವರ್ಷಗಳ ಹಿಂದೆ ಜನಿಸಿದ ಶಿವಾಜಿ, ಅಂದಿನ ಕಾಲಘಟ್ಟದಲ್ಲಿಯೇ ದೇಶ ಕಟ್ಟುವಲ್ಲಿ ಶ್ರದ್ಧೆಯಿಂದ ಹೋರಾಡಿದ್ದರು. ಜನಸಾಮಾನ್ಯರಲ್ಲಿ ರಾಷ್ಟ್ರೀಯತೆಯನ್ನು ಜಾಗೃತಿಗೊಳಿಸಿದರೆ ಉತ್ತಮ ಸಮಾಜ ಕಟ್ಟಬಹುದು ಎಂಬುದಕ್ಕೆ ಶಿವಾಜಿ ಶ್ರೇಷ್ಠ ನಿದರ್ಶನ ಎಂದರು.
ಕೇವಲ 50 ವರ್ಷ ಕಾಲ ಬಾಳಿದ ಅವರು, ಸಾಮಾಜಿಕ ಸುಧಾರಕರಾಗಿ ಸತಿ ಸಹಗಮನ ಪದ್ಧತಿ ನಿಷೇಧ, ಗೋಹತ್ಯೆ ನಿಷೇಧ ಸೇರಿದಂತೆ ಅನೇಕ ಅನಿಷ್ಟ ಪದ್ಧತಿಗಳಿಗೆ ನಿಷೇಧ ಹೇರಿದ್ದರು. ತನ್ನ ಆಡಳಿತದಲ್ಲಿ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ಸಂಪನ್ಮೂಲವನ್ನು ಆವಶ್ಯಕತೆಗೆ ಅನುಗುಣವಾಗಿ ಬಳಸಿಕೊಳ್ಳುತ್ತಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ ಮಾತನಾಡಿ, ಪ್ರಜೆಗಳು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಹಲವಾರು ಜನೋಪಯೋಗಿ ಯೋಜನೆಗಳನ್ನು ಆಡಳಿತದಲ್ಲಿ ಜಾರಿಗೆ ತಂದರು. ಶಿವಾಜಿ ಸೇರಿದಂತೆ ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರ ತತ್ವ ಸಿದ್ಧಾಂತಗಳನ್ನು ಅನುಸರಿಸಿದಾಗ ಮಾತ್ರ ಜಯಂತಿ ಕಾರ್ಯಕ್ರಮಗಳು ಸಾರ್ಥಕತೆ ಹೊಂದುತ್ತವೆ ಎಂದರು.
ಇದೇ ಸಂದರ್ಭದಲ್ಲಿ ಪವರ್ ಲಿಫ್ಟಿಂಗ್'ನಲ್ಲಿ ಸಾಧನೆಗೈದ ಮರಾಠ ಸಮುದಾಯದ ಪ್ರತಿಕ್ಷಾ ನಾಯಕ್ ಅವರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತು ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್, ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ನಾಯಕ್ ಮೊದಲಾದವರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಬಸ್ರೂರು ಶಾರದಾ ಕಾಲೇಜು ಉಪನ್ಯಾಸಕ ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಇಂದಿರಾ ಬಿ. ವಂದಿಸಿದರು.
.jpg)
.jpg)