ಸಾವಯವ ಕೃಷಿಯಿಂದ ಮಾತ್ರ ಸುಸ್ಥಿರ ಬದುಕು

ಲೋಕಬಂಧು ನ್ಯೂಸ್, ಹೆಬ್ರಿ
ಕೃಷಿಯಿಂದಲೇ ದೇಶದ ಭವ್ಯ ಬೆಳವಣಿಗೆ ಸಾಧ್ಯ. ಅದು ಮುಂದಿನ ಅನಿವಾರ್ಯ ಕೂಡಾ ಆಗಲಿದೆ. ಸಾವಯವ ಕೃಷಿಯಿಂದ ಮಾತ್ರ ಸುಸ್ಥಿರ ಬದುಕು ಸಾಧ್ಯ ಎಂದು ಮಹಾರಾಷ್ಟ್ರದ ಕೊಲ್ಹಾಪುರ ಸಿದ್ದಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆ.21ರಂದು ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲ ಅಂಗವಾಗಿ ಶುಕ್ರವಾರ ಶ್ರೀನಿವಾಸ ಸಭಾ ಮಂಟಪದಲ್ಲಿ ಆಯೋಜಿಸಲಾದ ರೈತಪೀಠ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.


ಪ್ರಕೃತಿ ನಾಶವಾದರೆ ಮನುಷ್ಯ ನಾಶವಾದಂತೆ. ಪ್ರಕೃತಿ ಚೆನ್ನಾಗಿದ್ದರೆ ನಾವೆಲ್ಲರೂ ಚೆನ್ನಾಗಿದ್ದೇವೆ ಎಂದರ್ಥ. ಪ್ರಕೃತಿಯನ್ನು ನಾಶ ಮಾಡಿ ಬೆಳವಣಿಗೆ ಹುಚ್ಚುತನ. ನಮ್ಮ ಕ್ಷಣಿಕ ಸಂತೋಷಕ್ಕೆ ಪ್ರಕೃತಿ ನಾಶ ಮಾಡುತ್ತಿದ್ದೇವೆ. ಮಣ್ಣು, ನೀರು, ಗಾಳಿ, ಬೆಂಕಿ, ಆಕಾಶ ಎಂಬೀ ಪಂಚತತ್ವಗಳು ಶುದ್ಧವಾಗಿರಬೇಕು. ಗೋಧಾಮದಲ್ಲಿ ಕೃಷಿ ಪೂರಕ ಉತ್ತಮ ಚಟುವಟಿಕೆ ನಡೆಯುತ್ತಿರುವುದು ಸಂತೋಷದಾಯಕ. ರಾಮಕೃಷ್ಣ ಆಚಾರ್ ಕಾರ್ಯ ಶ್ಲಾಘನೀಯ ಎಂದ  ಶ್ರೀಗಳು,
ಮಣ್ಣಿನಲ್ಲಿ ಸಾಯಿಲ್‌ ಕಾರ್ಬನ್‌ ಹೆಚ್ಚಿಸುವ ಕಾರ್ಯ ನಡೆದಾಗ ಅಂತರ್ಜಲ ಉಳಿಯುತ್ತದೆ. ನೀರಿನ ಸಮಸ್ಯೆ ಕಾಡುವುದಿಲ್ಲ, ಅದರಿಂದ ಕೃಷಿ ಸಮೃದ್ಧವಾಗುತ್ತದೆ. ರಾಸಾಯನಿಕ ರಸಗೊಬ್ಬರ ಹಾಕಿ ಬೆಳೆಸಿದ ವಿಷಯುಕ್ತ ಆಹಾರಗಳೇ ಭಾರತದ ಜನರ ಬದುಕನ್ನು ನಾಶ ಪಡಿಸುತ್ತಿದೆ. ನಾವು ಉಣ್ಣುವ ಅನ್ನ ಮತ್ತು ಕುಡಿಯುವ ನೀರು ಸರಿಯಿಲ್ಲ. ಹಾಗಾಗಿ ಬಹುತೇಕರ ಬದುಕು ಅತಂತ್ರವಾಗುತ್ತಿದೆ. ಸಾವಯವ ಭತ್ತ ಬೇಸಾಯ ಮತ್ತು ಕೃಷಿಯನ್ನು ಮಾಡಿದಾಗ ಬದುಕು ಉಳಿಯುತ್ತದೆ. ಪುರಾತನ ಭತ್ತದ ತಳಿಗಳನ್ನು ಉಳಿಸಬೇಕು, ಆ ಅನ್ನ ಉಂಡಾಗ ಮಾತ್ರ ನಮ್ಮ ಜೀವ ಉಳಿಯುತ್ತದೆ. ಮೊದಲು ನಮ್ಮ ಆರೋಗ್ಯದ ಬೆಲೆ ತಿಳಿದು ಕಾಪಾಡಬೇಕು ಎಂದರು.


ಈ ಸಂದರ್ಭದಲ್ಲಿ 240ಕ್ಕೂ ಹೆಚ್ಚು ಭಾರತೀಯ ಭತ್ತದ ತಳಿ ಸಂರಕ್ಷಣೆ ಮಾಡಿದ ಅಪೂರ್ವ ಕೃಷಿಋಷಿ ಬಿ.ಕೆ.ದೇವರಾಯ ಮಿತ್ತಬಾಗಿಲು ಅವರನ್ನು ಮೂಡಬಿದಿರೆ ಎಸ್‌ಕೆಎಫ್‌ ಸಂಸ್ಥೆ ನೀಡುವ ಪ್ರಥಮ ರೈತಪೀಠ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ  ಡಾ. ಎಂ. ಮೋಹನ ಆಳ್ವ ಮಾತನಾಡಿ, ರಾಮಕೃಷ್ಣ ಆಚಾರ್ ಹೊಸತನದ ನಾಗಮಂಡಲ ಮಾಡಿಸುವ ಮೂಲಕ ಮಾದರಿಯಾಗಿದ್ದಾರೆ.


ಕೃಷಿಗೆ ಆದ್ಯತೆ ನೀಡಿದ ನಾಗಮಂಡಲ ಇದಾಗಿದ್ದು ಕೃಷಿಯನ್ನು ಮುಂದಿನ ಜನಾಂಗಕ್ಕೆ ಆಕರ್ಷಿತವಾಗುವಂತೆ ಮಾಡಿ, ಕೃಷಿ ನಿರಾಶದಾಯಕವಾಗಿಲ್ಲ ಎಂಬುದು ಗೋಧಾಮದಲ್ಲಿ ನಡೆಸಿರುವ ವಿವಿಧ ರೀತಿಯ ಕೃಷಿಗಳೇ ಕಾರಣ. ಮುಂದೆ ಬಹುಜನರನ್ನು ಆಕರ್ಷಿಸುವ ತಾಣವಾಗಿ ಬೆಳೆಯಲಿ. ನಾಗಮಂಡಲದ ಮೂಲಕ ಕೃಷಿ ಕ್ಷೇತ್ರದ  ಬೆಳವಣಿಗೆಗೆ ಈ ಕಾರ್ಯಕ್ರಮ ನಾಂದಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಬೆಳಗಾವಿ ನಿಡಸೋಸಿ ಶ್ರೀ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಡಾ.ಜಿ. ರಾಮಕೃಷ್ಣ ಆಚಾರ್ ಕಾರ್ಯವನ್ನು ಶ್ಲಾಘಿಸಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಮುನಿಯಾಲು ಗೋಧಾಮ ಮತ್ತು ಮೂಡುಬಿದಿರೆ ಎಸ್‌ಕೆಎಫ್‌ ಸಮೂಹ ಸಂಸ್ಥೆ ಸಂಸ್ಥಾಪಕ ಡಾ.ಜಿ. ರಾಮಕೃಷ್ಣ ಆಚಾರ್‌, ತಮ್ಮ ಬದುಕನ್ನೇ ಕೃಷಿ ಕಾಯಕಕ್ಕೆ ಅರ್ಪಿಸಿರುವ ರೈತರ ತ್ಯಾಗ, ಪರಿಶ್ರಮ ಮತ್ತು ರೈತರ ಮಹತ್ವ ಗುರುತಿಸುವ ಆಶಯದಿಂದ 'ರೈತಪೀಠ'  ಗೌರವ ಪ್ರಶಸ್ತಿ ಸ್ಥಾಪಿಸಲಾಗಿದೆ.


ರೈತರನ್ನು ಗೌರವಿಸುವುದು ನಮ್ಮ ಮುಖ್ಯ ಉದ್ದೇಶ. ಯುವ ಸಮುದಾಯ ಕೃಷಿಯತ್ತ ಆಕರ್ಷಿತರಾಗಬೇಕು, ಕೃಷಿಯನ್ನೂ ಕಾರ್ಪೋರೇಟ್‌ ವ್ಯವಸ್ಥೆ ಹಂತಕ್ಕೆ ಬೆಳೆಸಬೇಕು, ಮುನಿಯಾಲಿನ ಗೋಧಾಮ ಎಂಬ ಕೃಷಿಲೋಕವನ್ನು ಕಂಡು ಯುವಕರು ಕೃಷಿಯಲ್ಲಿ ತೊಡಗಿ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಪ್ರಕೃತಿಯಿಂದ ಪ್ರಕೃತಿಗೆ ಎಂಬ ವಿನೂತನ ಪರಿಕಲ್ಪನೆಯಲ್ಲಿ‌ ಶ್ರೀಮನ್ನಾಗಮಂಡಲದಲ್ಲಿ ರೈತಪೀಠ ಪ್ರಶಸ್ತಿ ಪ್ರದಾನ ಮಾಡುತ್ತಿರುವುದಾಗಿ ಹೇಳಿದರು.



ಪುಸ್ತಕ ಬಿಡುಗಡೆ
ಮುನಿಯಾಲು ಸಂಜೀವಿನಿ ಗೋಧಾಮದ ಪ್ರವರ್ತಕ ಡಾ.ಜಿ. ರಾಮಕೃಷ್ಣ ಆಚಾರ್ಯ ಅವರ ಸಾಧನೆ ಯಶೋಗಾಥೆಯನ್ನು ದಾಖಲಿಸಿದ ಡಾ. ನರೇಂದ್ರ ರೈ ದೆರ್ಲ ವಿರಚಿತ 'ರೈತಪೀಠ- ಇದು ಈ ನೆಲದ ಜ್ಞಾನಪೀಠ' ಕೃತಿಯನ್ನು ಅನಾವರಣಗೊಳಿಸಲಾಯಿತು.


ಕಾಂಗ್ರೆಸ್‌ ಮುಂದಾಳು ಮುನಿಯಾಲು ಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಗೋಧಾಮದ ಸವಿತಾ ಆರ್.‌ ಆಚಾರ್, ಪ್ರಜ್ವಲ್‌ ಆರ್.‌ ಆಚಾರ್‌, ಮಂಗಳೂರು ವಿಶ್ವಕರ್ಮ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಹರೀಶ ಆಚಾರ್ಯ ಜಲಕದಕಟ್ಟೆ, ಮಂಗಳೂರು ಎಸ್.ಕೆ.ಜಿ.ಐ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪೆರ್ಡೂರು ಉಪೇಂದ್ರ ಆಚಾರ್ಯ, ಶ್ರೀಮನ್ನಾಗಮಂಡಲ ಸೇವಾ ಸಮಿತಿ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಬಾರ್ಕೂರು ದಾಮೋದರ ಶರ್ಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಶೆಟ್ಟಿ ಕಾರ್ಕಳ ಇದ್ದರು.