ಲೋಕಬಂಧು ನ್ಯೂಸ್, ಉಡುಪಿ
ಜನಸಾಮಾನ್ಯರಿಗೆ ಅರ್ಥವಾಗುವ ಸರಳ ಭಾಷೆ ಮತ್ತು ಪದಗಳಲ್ಲಿ ತ್ರಿಪದಿಗಳನ್ನು ಹೇಳುವ ಮೂಲಕ ಸಾಮಾಜಿಕ ಅಂಧಕಾರ ಹೋಗಲಾಡಿಸಿ ಸಮಾಜ ತಿದ್ದುವಲ್ಲಿ ಶ್ರಮಿಸಿದ ಸರ್ವಜ್ಞ ಕವಿ ಇಂದಿನ ಪೀಳಿಗೆಯ ಉತ್ತಮ ಜೀವನ ನಿರ್ವಹಣೆಗೆ ಸನ್ಮಾರ್ಗ ರೂಪಿಸಿದ್ದಾರೆ ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಹೇಳಿದರು.ಹಿರಿಯಡ್ಕದ ಡಾ. ಚಂದಯ್ಯ ಹೆಗ್ಡೆ ಸಭಾಭವನದಲ್ಲಿ ಜಿಲ್ಲಾಡಳಿತ ಉಡುಪಿ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಡುಪಿ ಜಿಲ್ಲಾ ಕುಲಾಲ ಸಂಘಗಳ ಒಕ್ಕೂಟ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಡೆದ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಕವಿ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.16ನೇ ಶತಮಾನದ ಪ್ರಸಿದ್ಧ ಕನ್ನಡ ತ್ರಿಪದಿ ಕವಿಯಾದ ಸರ್ವಜ್ಞ ಸಾಮಾಜಿಕ ಸಮಾನತೆ, ನೀತಿ ಮತ್ತು ಜ್ಞಾನವನ್ನು ಸರಳ ತ್ರಿಪದಿಗಳ ಮೂಲಕ ಬೋಧಿಸಿದ್ದಾರೆ. ಸರ್ವಜ್ಞನ ತ್ರಿಪದಿಗಳು ಕನ್ನಡ ಸಾಹಿತ್ಯದಲ್ಲಿ ಅದರಲ್ಲೂ ವಿಶೇಷವಾಗಿ ಜನಸಾಮಾನ್ಯರಲ್ಲಿ ನೀತಿ ಪಾಠ ಬಿತ್ತಲು ಇಂದಿಗೂ ಸಹಕಾರಿ ಎಂದರು.
ವಿಶೇಷ ಉಪನ್ಯಾಸ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಶೇಖರ ಕುಲಾಲ್, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸರ್ವಜ್ಞ ಬರೆಯದ ಕ್ಷೇತ್ರಗಳಿಲ್ಲ. ಸರ್ವಜ್ಞನ ತ್ರಿಪದಿಗಳ ಸಾರಗಳಿಂದ ಪರಿಣಾಮಕಾರಿ ವ್ಯಕ್ತಿತ್ವ ಹೊಂದಲು ಸಾಧ್ಯವಿದ್ದು ವಿದ್ಯಾರ್ಥಿಗಳು ಕವಿ ಸರ್ವಜ್ಞನ ಆದರ್ಶ, ತತ್ವ, ವಿಚಾರಧಾರೆಗಳನ್ನು ಆಳವಡಿಸಿಕೊಂಡು ಸತ್ಪ್ರಜೆಗಳಾಗಿ ಜೀವನ ರೂಪಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಕವಿ ಸರ್ವಜ್ಞನ ಕುರಿತು ರಸಪ್ರಶ್ನೆ ನಡೆಸಿ, ವಿಜೇತರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಸಂತೋಷ್ ಕುಲಾಲ್, ಪೆರ್ಡೂರು ಕುಲಾಲ ಸಂಘದ ಅಧ್ಯಕ್ಷ ಕಾಳು ಕುಲಾಲ, ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ವೀಣಾ, ಉಪ ಪ್ರಾಂಶುಪಾಲ ಪ್ರಕಾಶ್ ಪ್ರಭು, ಉಡುಪಿ ಜಿಲ್ಲಾ ಕುಲಾಲ ಸಂಘಗಳ ಒಕ್ಕೂಟದ ಪದಾಧಿಕಾರಿಗಳು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಕನ್ನಡ ಉಪನ್ಯಾಸಕ ರಾಮಾಂಜಿ ನಿರೂಪಿಸಿ, ಶಾಲೆಯ ಹಿಂದಿ ಶಿಕ್ಷಕ ರವೀಂದ್ರ ಪ್ರಭು ವಂದಿಸಿದರು.