ಲಭಿಸಿದ ನಕ್ಷೆ, ಧರಣಿ ಅಂತ್ಯ

ಲೋಕಬಂಧು ನ್ಯೂಸ್ ಉಡುಪಿ, ಮಾ.24
ಬಡಾನಿಡಿಯೂರು ಗ್ರಾಮದ 90 ಸೆಂಟ್ಸ್ ಜಾಗದ ವಾಣಿಜ್ಯ ಏಕವಿನ್ಯಾಸ ನಕ್ಷೆ ಲಭಿಸಿದ ಕಾರಣ ಮಾಜಿ ಶಾಸಕ ಕೆ. ರಘುಪತಿ ಭಟ್‌ ಅವರು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಪ್ರತಿಭಟನಾ ಧರಣಿಯನ್ನು ಎರಡನೇ ದಿನವಾದ ಮಂಗಳವಾರ ಅಂತ್ಯಗೊಳಿಸಿದರು.ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಹೇಶ್ ಜೆ. ಅವರು ತಾತ್ಕಾಲಿಕ ಏಕ ವಿನ್ಯಾಸ ನಕ್ಷೆಯನ್ನು ಧರಣಿ ಸ್ಥಳಕ್ಕೆ ಬಂದು ರಘುಪತಿ ಭಟ್ ಅವರಿಗೆ ಹಸ್ತಾಂತರಿಸಿದರು.


ಬಳಿಕ ಮಾತನಾಡಿದ ಮಹೇಶ್ ಜೆ., ಬಡಾನಿಡಿಯೂರು ಗ್ರಾಮದ ಜಾಗದ ವಿಚಾರವಾಗಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆಯಾಗಿದ್ದ ಕಾರಣಕ್ಕೆ ವಕೀಲರಿಂದ ಅಭಿಪ್ರಾಯ ಪಡೆದು ತಾತ್ಕಾಲಿಕ ಏಕವಿನ್ಯಾಸ ನಕ್ಷೆಯನ್ನು ರಘುಪತಿ ಭಟ್‌ ಅವರಿಗೆ ಹಸ್ತಾಂತರಿಸಿದ್ದೇವೆ. ರಸ್ತೆ ಹಸ್ತಾಂತರಿಸಿದ ಬಳಿಕ ಅವರಿಗೆ ಅಂತಿಮ ಆದೇಶ ನೀಡಲಾಗುವುದು ಎಂದರು.


ಏಕವಿನ್ಯಾಸ ನಕ್ಷೆಗೆ ಅನುಮೋದನೆ ಲಭಿಸಿದ ಬಳಿಕ ಮಾತನಾಡಿದ ರಘುಪತಿ ಭಟ್, ಏಕ ವಿನ್ಯಾಸ ನಕ್ಷೆಗೆ ತಾತ್ಕಾಲಿಕವಾಗಿ ಅನುಮೋದನೆ ಕೊಟ್ಟಿದ್ದಾರೆ. ಮೂರು ತಿಂಗಳಲ್ಲಿ ಸಿಗಬೇಕಾದುದು ನನಗೆ 24 ತಿಂಗಳ ಬಳಿಕ ಧರಣಿ ಕುಳಿತು ಸಿಕ್ಕಿದೆ ಎಂದರು.


ಕಾನೂನು ಪ್ರಕಾರ ಸರಿ ಇದ್ದ ಕಾರಣ ನನಗೆ ಏಕವಿನ್ಯಾಸ ನಕ್ಷೆಗೆ ತಾತ್ಕಾಲಿಕವಾಗಿ ಅನುಮೋದನೆ ಸಿಕ್ಕಿದೆ. ನನ್ನ ಜಾಗ ಕಾನೂನು ಬಾಹಿರ ಎನ್ನುವವರಿಗೆ ಇದೇ ಉತ್ತರ ಎಂದರು.


ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸಾಕಷ್ಟು ಅವ್ಯವಸ್ಥೆಗಳಿವೆ. ಟಿಡಿಆರ್ ಸಿಗದೆ ಹಲವರು ಸಮಸ್ಯೆ ಎದುರಿಸುತ್ತಿದ್ದಾರೆ. ಅವರ ಸಮಸ್ಯೆಯನ್ನು ಮುಂದಿನ ತಿಂಗಳ 12ರೊಳಗೆ ಪರಿಹರಿಸದಿದ್ದಲ್ಲಿ ಹೋರಾಟ ನಡೆಸುತ್ತೇನೆ ಎಂದು ಎಚ್ಚರಿಸಿದರು.


ಶಾಸಕ ಯಶ್‌ಪಾಲ್ ಸುವರ್ಣ ಈ ವಿಚಾರದಲ್ಲಿ ಅಧಿಕಾರಿಗಳ ಮೂಲಕ ತೊಂದರೆ ಮಾಡಿದ್ದಾರೆ ಎಂದು ರಘುಪತಿ ಭಟ್‌ ಆರೋಪಿಸಿದ್ದರು.


ರಘಪತಿ ಭಟ್‌ ಹೋರಾಟಕ್ಕೆ ಬೆಂಬಲ ಸೂಚಿಸಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು, ಸಾರ್ವಜನಿಕರು ಮಂಗಳವಾರವೂ ಧರಣಿ ಸ್ಥಳದಲ್ಲಿ ಸೇರಿದ್ದರು.