ಲೋಕಬಂಧು ನ್ಯೂಸ್, ಉಡುಪಿ
ಚತುರ್ಥ ವಿಶ್ವಗೀತಾ ಪರ್ಯಾಯವನ್ನು ವೈಭವಯುತವಾಗಿ ಪೂರೈಸಿದ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಫೆ.21ರಂದು ಬೆಂಗಳೂರು ನಗರ ಪುರಪ್ರವೇಶ ಮಾಡಲಿದ್ದು, ಉಭಯ ಶ್ರೀಗಳನ್ನು ವೈವಪೂರ್ಣವಾಗಿ ಸ್ವಾಗತಿಸಿ, ಅಭಿನಂದನೆ ಸಲ್ಲಿಸಲಾಗುವುದು.ಬಸವನಗುಡಿ ಶ್ರೀ ಗೋವರ್ಧನ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಂಸದರಾದ ಪಿ.ಸಿ.ಮೋಹನ್ ಮತ್ತು ಡಾ. ಮಂಜುನಾಥ್ ಎನ್., ವಿದ್ವಾಂಸ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ, ಬಸವನಗುಡಿ ಶಾಸಕ ಎಸ್.ರವಿ ಸುಬ್ರಹ್ಮಣ್ಯಂ, ಬಿಜೆಪಿ ಮುಖಂಡರಾದ ಎನ್. ಆರ್.ರಮೇಶ್, ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಘುನಾಥ್ ಎಸ್., ಬೆಂಗಳೂರು ಗಾಯನ ಸಮಾಜ ಅಧ್ಯಕ್ಷ ಡಾ. ಎಂ.ಆರ್.ವಿ.ಪ್ರಸಾದ್, ಚಿತ್ರನಟ ಮಾಸ್ಟರ್ ಆನಂದ್ ಭಾಗವಹಿಸಲಿದ್ದಾರೆ.
ಬೆಂಗಳೂರು ಪೂರ್ಣಪ್ರಜ್ಞ ಸಂಶೋಧನ ಕೇಂದ್ರದ ನಿರ್ದೇಶಕ ಡಾ. ವೀರನಾರಾಯಣ ಪಾಂಡುರಂಗಿ ಶುಭಾಶಂಸನೆಗೈಯಲಿದ್ದಾರೆ.
ಅಂದು ಸಂಜೆ 5 ಗಂಟೆಗೆ ಉಭಯ ಶ್ರೀಪಾದರನ್ನು ಗುರು ನರಸಿಂಹ ಸಭಾಭವನದಿಂದ ಭವ್ಯ ಮೆರವಣಿಗೆ ಮೂಲಕ ಬಸವನಗುಡಿ ಶ್ರೀ ಪುತ್ತಿಗೆ ಮಠದ ಗೋವರ್ಧನ ಕ್ಷೇತ್ರಕ್ಕೆ ಬರಮಾಡಿಕೊಳ್ಳಲಾಗುವುದು. ಬಳಿಕ 7 ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ಅಭಿನಂದನ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ವಿವಿಧ ಭಜನಾ ಮಂಡಳಿಗಳ ಸದಸ್ಯೆಯರಿಂದ ಭಗವದ್ಗೀತಾ ಪಾರಾಯಣವೂ ನಡೆಯಲಿದೆ ಮತ್ತು ಶ್ರೀಗಳಿಂದ ಭಕ್ತರಿಗೆ ಕೋಟಿ ಗೀತಾ ಲೇಖನ ಯಜ್ಞ ದೀಕ್ಷೆ ನಡೆಯಲಿದೆ ಎಂದು ಸ್ವಾಗತ ಸಮಿತಿ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ತಿಳಿಸಿದ್ದಾರೆ.