ಬ್ಯಾಂಕ್ ಮೊಹರು ದುರ್ಬಳಕೆ ಮಾಡಿ ನಗರಸಭೆಗೆ ವಂಚನೆ

ಲೋಕಬಂಧು ನ್ಯೂಸ್, ಉಡುಪಿ
ಇಲ್ಲಿನ ನಗರಸಭೆಯಲ್ಲಿ ಆಸ್ತಿ ತೆರಿಗೆ ಪಾವತಿಯಲ್ಲಿ ನಡೆದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಯೂನಿಯನ್ ಬ್ಯಾಂಕ್ ಸೀಲ್ ದುರ್ಬಳಕೆ ಮಾಡಿ ಹಣ ವಂಚಿಸಿದ ಆರೋಪದಲ್ಲಿ ಶಾಂತಾ (43) ಹಾಗೂ ಸುಪೇಶ್ (25) ಎಂಬೀರ್ವನ್ನು ಬಂಧಿಸಲಾಗಿದೆ.ಉಡುಪಿ ನಗರಸಭೆ ಕಚೇರಿಯಲ್ಲಿ ಆಸ್ತಿತೆರಿಗೆ ಪಾವತಿಯನ್ನು ಇ-ಸ್ವೀಕೃತಿ ಮೂಲಕ ಚಲನ್ ಸೃಜನೆ ಮಾಡಿ ಯೂನಿಯನ್ ಬ್ಯಾಂಕ್‌ನಲ್ಲಿ ನಗರಸಭೆ ಖಾತೆ ಸಂಖ್ಯೆಗೆ ಜಮಾ ಮಾಡಲಾಗುತ್ತದೆ.


ಫೆ.3ರಂದು ಕಚೇರಿಯಲ್ಲಿ ಆಸ್ತಿ ತೆರಿಗೆ ಪಾವತಿ ತುಲನೆಯಲ್ಲಿ ಜ.28ರಂದು ಪಾವತಿಯಾದಂತೆ ಯೂನಿಯನ್ ಬ್ಯಾಂಕ್ ಸೀಲ್ ಹೊಂದಿದ್ದ ಚಲನ್ ಇದ್ದರೂ ಬ್ಯಾಂಕ್ ದಾಖಲೆಗಳಲ್ಲಿ ಅದರ ನಮೂದು ಇಲ್ಲದಿರುವುದು ಪತ್ತೆಯಾಯಿತು. ಬಳಿಕ ಫೆ.4ರಂದು ಮರು ಪರಿಶೀಲನೆ ನಡೆಸಿದಾಗ ಫೆ.4ರ ದಿನಾಂಕದ ಸೀಲ್ ಹೊಂದಿದ್ದ ಚಲನ್‌ಗಳಲ್ಲಿ ಅದಾಗಲೇ ಜ.28ರಂದು ಜನರೇಟ್ ಆಗಿದ್ದ ಒಂದೇ ಚಲನ್ ಸಂಖ್ಯೆಗಳು ಕಂಡುಬಂದವು.


ಒಂದೇ ಚಲನ್ ಸಂಖ್ಯೆಗೆ ಎರಡು ವಿಭಿನ್ನ ದಿನಾಂಕಗಳಲ್ಲಿ ಯೂನಿಯನ್ ಬ್ಯಾಂಕ್ ಸೀಲ್ ಇರುವ ಚಲನ್‌ಗಳು ಪತ್ತೆಯಾಗಿದ್ದು, ಬ್ಯಾಂಕ್ ಸೀಲ್ ನಕಲಿ ಮಾಡಿ ಆಸ್ತಿ ತೆರಿಗೆ ಹಣ ದುರ್ಬಳಕೆ ಮಾಡಿರುವ ಶಂಕೆ ವ್ಯಕ್ತವಾಯಿತು.


ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ ನೀಡಿದ ದೂರಿನ ಮೇರೆಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದ್ದು, ಆರೋಪಿಗಳನ್ನು ಬಂಧೀಸಲಾಗಿದೆ.


ಆರೋಪಿಗಳು ಪ್ರಕರಣದಲ್ಲಿ ಬಳಸಿದ ನಕಲಿ ಸೀಲ್ ಹಾಗೂ ಸಂಬಂಧಿತ ದಾಖಲೆಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ನಿರ್ದೇಶನದಂತೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕ‌ರ್ ನಾಯ್ಕ ಹಾಗೂ ಡಿವೈಎಸ್‌ಪಿ ಬೆಳ್ಳಿಯಪ್ಪ ಮಾರ್ಗದರ್ಶನದಲ್ಲಿ ಉಡುಪಿ ನಗರ ಪೊಲೀಸ್‌ ಠಾಣೆಯ ಪ್ರಭಾರ ನಿರೀಕ್ಷಕ ಮಹೇಶ್ ಪ್ರಸಾದ್ ಪಿ. ನೇತೃತ್ವದಲ್ಲಿ ಪಿಎಸ್‌ಐ ಗಂಗಪ್ಪ ಎಸ್., ಸುರೇಂದ್ರ ಡಿ., ಸಂತೋಷ್ ರಾಥೋಡ್, ನೇತ್ರಾವತಿ, ಪವಿತ್ರ, ಸ್ಪೂರ್ತಿ ಸಹಕರಿಸಿದರು.