ಕರ್ನಾಟಕ ಸರ್ಕಾರ ಸಹಕಾರ ನೀಡಿದರೆ ಎರ್ಮಾಳಿನಲ್ಲಿ ಏರ್ ಪೋರ್ಟ್

ಲೋಕಬಂಧು ನ್ಯೂಸ್, ಉಡುಪಿ
ಕರ್ನಾಟಕ ರಾಜ್ಯ ಸರಕಾರ ಸಹಕಾರ ನೀಡಿದರೆ ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯ ಪಡುಬಿದ್ರಿ ಬಳಿಯ ಎರ್ಮಾಳಿನಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಬಹುದು ಎಂದು ವಿಮಾನ ಯಾನ ಖಾತೆ ಸಚಿವ ಕಿಂಜರಪು ರಾಮಮೋಹನ್ ನಾಯ್ಡು ಅವರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮನವಿ ಮೇರೆಗೆ ಸಂಸದ ಕೋಟ, ಎರ್ಮಾಳಿನಲ್ಲಿ ನೂತನ ವಿಮಾನ ನಿಲ್ದಾಣ ಸ್ಥಾಪನೆ ಕುರಿತಂತೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದರು.


ಆ ಬಗ್ಗೆ ಸಂಸದರಿಗೆ ಸಚಿವರು ಬರೆದ ಪತ್ರದಲ್ಲಿ ಉಡಾನ್ ಯೋಜನೆ ವಿಮಾನ ನಿಲ್ದಾಣ ಅಭಿವೃದ್ಧಿ ಮತ್ತು ಸುಧಾರಣೆಗಾಗಿ ಕೇಂದ್ರದ ಸಹಕಾರ ನೀಡಲಿದ್ದು ಸೂಕ್ತ ಸ್ಥಳ ಗುರುತಿಸಿ, ಯೋಜನೆಯ ಕಾರ್ಯ ಸಾಧ್ಯತೆ ಅಧ್ಯಯನ ನಡೆಸಿ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಲಹೆ ನೀಡಿದ್ದಾರೆ.


ಭಾರತ ಸರ್ಕಾರದ ಗ್ರೀನ್ ಫೀಲ್ಡ್ ನೀತಿಯಂತೆ ಕೇಂದ್ರ ಸರಕಾರ ನೆರವು ನೀಡಲಿದೆ ಎಂದು ಕೇಂದ್ರ ವಿಮಾನ ಯಾನ ಸಚಿವ ಕಿಂಜರಪು ರಾಮಮೋಹನ ನಾಯ್ಡು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎರ್ಮಳಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಬಗ್ಗೆ ಕುತೂಹಲ ಗರಿಗೆದರಿದೆ.