ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನ

ಲೋಕಬಂಧು ನ್ಯೂಸ್, ಉಡುಪಿ
ಜನ- ವಾಹನ ದಟ್ಟಣೆ ಇರುವ ಕಲ್ಸಂಕ ವೃತ್ತದ ಬಳಿ ಮೈಮೇಲೆ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಳ್ಳುವುದಾಗಿ ಹೇಳಿದ ವ್ಯಕ್ತಿಯನ್ನು ನಗರ ಪೋಲಿಸ್ ಠಾಣೆಯ ಪೋಲಿಸರು ಹಾಗೂ ಸಮಾಜಸೇವಕ ನಿತ್ಯಾನಂದ ಒಳಕಾಡು ತಡೆದು ಪ್ರಾಣಾಪಾಯದಿಂದ ರಕ್ಷಿಸಿರುವ ಘಟನೆ ಸಂಭವಿಸಿದೆ.ವಿಕೃತ ಕೃತ್ಯದಿಂದ ಭಯದ ವಾತಾವರಣ ಸೃಷ್ಟಿಸಿದ ಆಗಂತುಕ ಪಾನಮತ್ತನಾಗಿದ್ದನೋ ಅಥವಾ ಮಾನಸಿಕ ವ್ಯಸ್ಥನೋ ಎಂಬುದು ಸ್ವಷ್ಟವಾಗಿಲ್ಲ.


ವಾಹನ ನಿಯಂತ್ರಣ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಸಿಬ್ಬಂದಿಗಳ ಕರ್ತವ್ಯಕ್ಕೂ ಅಡ್ಡಿಪಡಿಸಿರುವ ಕೃತ್ಯ ನಡೆಸಿದ್ದ. ಬಾಟಲಿಯಲ್ಲಿ ಪೆಟ್ರೊಲ್ ತುಂಬಿಸಿ ಕೊಂಡುಬಂದಿದ್ದ ಆತ ಅದನ್ನು ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವುದಾಗಿ ಬೊಬ್ಬಿಡುತ್ತಿದ್ದ, ಹಲವು ಬಾರಿ ಪೋಲಿಸರು ಬಾಟಲಿಯನ್ನು ಕಸಿದುಕೊಂಡಿದ್ದರು. ಮತ್ತೊಮ್ಮೆ ಬಾಟಲಿಯಲ್ಲಿ ಪೆಟ್ರೋಲ್ ತಂದು ಮೈಮೇಲೆ ಸುರಿದುಕೊಂಡಿದ್ದ. ಪೋಲಿಸರು ಸಮಯಪ್ರಜ್ಞೆಯಿಂದ ಸಂಭವನೀಯ ದುರಂತ ತಪ್ಪಿಸಿದ್ದಾರೆ.


ವ್ಯಕ್ತಿಯನ್ನು ವಶಕ್ಕೆ ಪಡೆದ ಪೋಲಿಸರು, ಮನವೊಲಿಸಿ ಆತನ ಸ್ವಂತ ಊರಾದ ಗದಗಕ್ಕೆ ರವಾನಿಸುವ ವ್ಯವಸ್ಥೆ ಮಾಡಿದರು.