ಮುನಿಯಾಲು ಶ್ರೀಮನ್ನಾಗಮಂಡಲದಲ್ಲಿ ಬಿ.ಕೆ.ದೇವರಾಯ ಮಿತ್ತಬಾಗಿಲು ಅವರಿಗೆ ‘ರೈತಪೀಠ’ ಪ್ರಶಸ್ತಿ ಪ್ರದಾನ, ‘ರೈತಪೀಠ ಇದು ಈ ನೆಲದ ಜ್ಞಾನಪೀಠ’ ಕೃತಿ ಬಿಡುಗಡೆ
ಲೋಕಬಂಧು ನ್ಯೂಸ್, ಹೆಬ್ರಿ
ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆ. 19ರಿಂದ 21ರ ತನಕ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲದಲ್ಲಿ ಫೆ.20ರಂದು ಸಂಜೆ ಶ್ರೀನಿವಾಸ ಸಭಾಮಂಟಪದಲ್ಲಿ ರೈತಪೀಠ ಪ್ರಶಸ್ತಿ ಪ್ರದಾನ ನಡೆಯಲಿದೆ.
240ಕ್ಕೂ ಹೆಚ್ಚು ಭಾರತೀಯ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿರುವ ಅಪೂರ್ವ ಕೃಷಿಋಷಿ ಬಿ.ಕೆ.ದೇವರಾಯ ಮಿತ್ತಬಾಗಿಲು ಅವರು ಮೂಡುಬಿದಿರೆ ಎಸ್.ಕೆಎಫ್ ಸಂಸ್ಥೆ ನೀಡುವ ನೂತನ ಪ್ರಥಮ 'ರೈತಪೀಠ ಪ್ರಶಸ್ತಿ' ಸ್ವೀಕರಿಸುವರು.
ತಮ್ಮ ಬದುಕನ್ನೇ ಕೃಷಿ ಕಾಯಕಕ್ಕೆ ಅರ್ಪಿಸಿರುವ ರೈತರ ತ್ಯಾಗ, ಪರಿಶ್ರಮ ಮತ್ತು ರೈತರ ಮಹತ್ವವನ್ನು ಗುರುತಿಸುವ ಮಹತ್ವದ ಉದ್ದೇಶದಿಂದ ರೈತಪೀಠ ಎಂಬ ಗೌರವ ಪ್ರಶಸ್ತಿಯನ್ನು ಸ್ಥಾಪಿಸಿ ರೈತರನ್ನು ಗೌರವಿಸುವುದು ನಮ್ಮ ಮುಖ್ಯ ಉದ್ದೇಶ. ನಮ್ಮ ಯುವ ಸಮುದಾಯ ಕೃಷಿಯತ್ತ ಆಕರ್ಷಿತರಾಗಬೇಕು, ಕೃಷಿಯನ್ನೂ ಕಾರ್ಪೋರೇಟ್ ವ್ಯವಸ್ಥೆ ಹಂತಕ್ಕೆ ಬೆಳೆಸಬೇಕು, ಮುನಿಯಾಲಿನ ಗೋಧಾಮ ಎಂಬ ಕೃಷಿಲೋಕವನ್ನು ಕಂಡು ಯುವಕರು ಕೃಷಿಯಲ್ಲಿ ತೊಡಗಿ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂಬ ಆಶಯದಿಂದ ಪ್ರಕೃತಿಯಿಂದ ಪ್ರಕೃತಿಗೆ ಎಂಬ ವಿನೂತನ ಪರಿಕಲ್ಪನೆಯಲ್ಲಿ ಶ್ರೀಮನ್ನಾಗಮಂಡಲದಲ್ಲಿ ರೈತಪೀಠ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಮುನಿಯಾಲು ಗೋಧಾಮ ಮತ್ತು ಮೂಡುಬಿದಿರೆ ಎಸ್. ಕೆಎಫ್ ಸಮೂಹ ಸಂಸ್ಥೆ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್ ತನ್ನ ವಿನೂತನ ಯೋಜನೆ- ಯೋಚನೆ ಬಗ್ಗೆ ಮಾಹಿತಿ ನೀಡಿದರು.
ಮಹಾರಾಷ್ಟ್ರದ ಕೊಲ್ಹಾಪುರ ಸಿದ್ದಗಿರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ, ಬೆಳಗಾವಿ ನಿಡಸೋಸಿ ಶ್ರೀ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಸಾನಿಧ್ಯದಲ್ಲಿ ಅಧ್ಯಕ್ಷತೆಯನ್ನು ಮೂಡುಬಿದಿರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ವಹಿಸಲಿದ್ದಾರೆ. ಕಾರ್ಕಳದ ಕಾಂಗ್ರೆಸ್ ನಾಯಕ, ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಗೋಧಾಮದ ಪ್ರವರ್ತಕ ಡಾ.ಜಿ.ರಾಮಕೃಷ್ಣ ಆಚಾರ್, ಮಂಗಳೂರು ವಿಶ್ವಕರ್ಮ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಹರೀಶ ಆಚಾರ್ಯ ಜಲಕದಕಟ್ಟೆ, ಮಂಗಳೂರು ಎಸ್.ಕೆ.ಜಿಐ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಪೆರ್ಡೂರು ಉಪೇಂದ್ರ ಆಚಾರ್ಯ ಉಪಸ್ಥಿತರಿರುವರು.
ಗೋಧಾಮದ ಪ್ರವರ್ತಕ ಡಾ.ಜಿ.ರಾಮಕೃಷ್ಣ ಆಚಾರ್ಯ ಸಾಧನೆ ಯಶೋಗಾಥೆಯನ್ನು ದಾಖಲಿಸಿದ ಡಾ. ನರೇಂದ್ರ ರೈ ದೇರ್ಲ ವಿರಚಿತ 'ರೈತಪೀಠ ಇದು ಈ ನೆಲದ ಜ್ಞಾನಪೀಠ' ಕೃತಿ ಅನಾವರಣಗೊಳ್ಳಲಿದೆ.
ಫೆ.21ರಂದು ಸಭಾ ಮಂಡಲ
ಫೆ. 21ರಂದು ಬೆಳಗ್ಗಿನಿಂದ ವಿದ್ವಾನ್ ಕೊರಂಗ್ರಪಾಡಿ ಕುಮಾರಗುರು ತಂತ್ರಿ ನೇತೃತ್ವದಲ್ಲಿ ಏಕಪವಿತ್ರ ಶ್ರೀಮನ್ನಾಗಮಂಡಲದ ಆಶ್ಲೇಷಾ ಬಲಿದಾನ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ ದುರ್ಗಾ ನಮಸ್ಕಾರ ಪೂಜೆ, ರಾತ್ರಿ 8ರಿಂದ ಹಾಲಿಟ್ಟು ಸೇವೆ, ಏಕಪವಿತ್ರ ಶ್ರೀಮನ್ನಾಗಮಂಡಲ ಸೇವೆ ನಡೆಯಲಿದೆ. ಮಧ್ಯಾಹ್ನ 12.30ರಿಂದ ಶ್ರೀ ಭವಾನೀ ಭೋಜನಾಲಯದಲ್ಲಿ ಶ್ರೀಮನ್ನಾಗಮಂಡಲದ ಸಂಪನ್ನದ ವರೆಗೆ ಮಹಾಅನ್ನಸಂತರ್ಪಣೆ ನಡೆಯಲಿದೆ.
ಸಭಾಮಂಡಲದ ದಿವ್ಯ ಸಾನಿಧ್ಯವನ್ನು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಉಡುಪಿ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ವಹಿಸಲಿದ್ದು, ಮುನಿಯಾಲು ಶ್ರೀಮನ್ನಾನಾಗಮಂಡಲ ಸೇವಾ ಸಮಿತಿ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಸುನಿಲ್ ಕುಮಾರ್, ಕಟಪಾಡಿ ಶ್ರೀ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠದ ಅಧ್ಯಕ್ಷ ಶ್ರೀಧರಾಚಾರ್ಯ ವಡೇರಹೋಬಳಿ ಉಪಸ್ಥಿತರಿರುವರು. ಆಧ್ಯಾತ್ಮಿಕ ಚಿಂತಕಿ, ಅಂಕಣಕಾರ್ತಿ ರೂಪ ಐಯ್ಯರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಸಕಲ ಸಿದ್ಧತೆ
ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆ.19ರಿಂದ 21ರ ತನಕ ನಡೆಯುವ ಏಕಪವಿತ್ರ ಶ್ರೀಮನ್ನಾಗಮಂಡಲದ ಯಶಸ್ಸಿಗಾಗಿ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಊರಿಗೆ ಊರೇ ಸಜ್ಜಾಗಿದೆ. ಡಾ.ಜಿ.ರಾಮಕೃಷ್ಣ ಆಚಾರ್ ಮಾರ್ಗದರ್ಶನದಲ್ಲಿ ಅಧ್ಯಕ್ಷ ದೇವಿಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀಕಾಂತ ಶೆಟ್ಟಿ ಕಾರ್ಕಳ ಮತ್ತು ದಾಮೋದರ ಶರ್ಮ ಬಾರ್ಕೂರು ಹಾಗೂ ಪ್ರಧಾನ ಸಮಿತಿ ಗೌರವಾಧ್ಯಕ್ಷರು, ಜೊತೆ ಕಾರ್ಯದರ್ಶಿಗಳು, ಮಾರ್ಗದರ್ಶಕರು ಮತ್ತು ವಿವಿಧ ಉಪಸಮಿತಿಗಳು ಅಭೂತಪೂರ್ವ ಮುನಿಯಾಲು ಶ್ರೀಮನ್ನಾಗಮಂಡಲದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ.