ರೈತರಿಗೆ ತೊಂದರೆಯಾಗದಂತೆ ಮಣ್ಣು ಸಾಗಾಟಕ್ಕೆ ಸೂಚನೆ

ಲೋಕಬಂಧು ನ್ಯೂಸ್, ಉಡುಪಿಕೃಷಿ ಚಟುವಟಿಕೆಗಳ ಬಳಕೆಗಾಗಿ ರೈತರು ತಮ್ಮ ಜಮೀನಿನ ಮಣ್ಣು ಸಾಗಾಟ ಮಾಡುತ್ತಿರುವಾಗ ತೊಂದರೆ ಆಗುತ್ತಿದೆ ಎಂಬ ದೂರು ಕೇಳಿಬರುತ್ತಿದ್ದು, ಈ ಸಮಸ್ಯೆ ಬಗೆಹರಿಸಿ ರೈತರಿಂದ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.ಜಿಲ್ಲಾ ವ್ಯಾಪ್ತಿಯಲ್ಲಿ ಕೃಷಿ ಉದ್ದೇಶಕ್ಕಾಗಿ ಮಣ್ಣು ಸಾಗಾಟ ಮಾಡುತ್ತಿರುವಾಗ ತಡೆ ಒಡ್ಡುತ್ತಿರುವ ಸಮಸ್ಯೆ ಬಗ್ಗೆ ಚರ್ಚಿಸಲು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ರೈತರು ಕೃಷಿ ಚಟುವಟಿಕೆಗಳಿಗೆ ತಮ್ಮ ಖಾಸಗಿ ಜಮೀನುಗಳಿಂದ ಮಣ್ಣು ಸಾಗಿಸಿ ಒಂದರಿಂದ ಇನ್ನೊಂದು ಕಡೆಗಳಿಗೆ ಸಾಗಿಸುತ್ತಿದ್ದಾರೆ. ಆದರೆ, ಅನ್ಯ ಉದ್ದೇಶಕ್ಕೆ ಬಳಸುತ್ತಿಲ್ಲ. ನಿಯಮಾನುಸಾರ ಅವರಿಗೆ ಸಮಸ್ಯೆ ಉಂಟಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದರು.


ಶಾಸಕ ಸುನಿಲ್ ಕುಮಾರ್ ಮಾತನಾಡಿ, ರೈತರು ತಮ್ಮ ಕೃಷಿ ಜಮೀನುಗಳಿಗೆ ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ದೂರನ್ನು ಕೆಲವರು ತಮ್ಮ ಲಾಭಕ್ಕಾಗಿ ನೀಡುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸಿಕೊಳ್ಳುವ ಅಗತ್ಯ ಇಲ್ಲ ಎಂದರು.


ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಇತ್ತೀಚೆಗೆ ಕೋಟ ವ್ಯಾಪ್ತಿಯಲ್ಲಿ ಮಣ್ಣು ಸಾಗಾಟ ಲಾರಿಯಿಂದ ಎರಡು ಅಪಘಾತ ಪ್ರಕರಣ ಸಂಭವಿದ್ದು, ಆ ನಂತರದ ದಿನಗಳಲ್ಲಿ ರೈತರು ಮಣ್ಣು ಸಾಗಾಟ ಸಂಬಂಧ ದೂರು ಬರುತ್ತಿವೆ. ಅಪಘಾತ ಪ್ರಕರಣದ ಮೊದಲು ಈ ರೀತಿಯ ದೂರುಗಳು ಬಂದಿಲ್ಲ. ರೈತರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದು ಸೂಕ್ತ ಎಂದರು.


ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ ಹಾಗೂ ಗುರುರಾಜ್ ಶೆಟ್ಟಿ ಗಂಟಿಹೊಳೆ, ಹೆಚ್ಚುವರಿ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ವಿಂದ್ಯಾ ಎನ್.ಎಮ್. ಮೊದಲಾದವರಿದ್ದರು.